ಮುಂಬೈ, ನ. 30 (DaijiworldNews/MB) : 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆ ಪಕ್ಷ ಸೇರಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಡಿಸೆಂಬರ್ 1 ರ ಮಂಗಳವಾರ ನಟಿ ಶಿವಸೇನೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಉಂಟಾಗಿ ಪಕ್ಷ ತೊರೆದಿದ್ದರು. ಈಗ ಅವರು ಶಿವಸೇನೆ ಸೇರ್ಪಡೆಯಾಗಲಿದ್ದು ಅವರ ಹೆಸರನ್ನು ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲು ಶಿವಸೇನೆಯು ಗವರ್ನರ್ ಬಿ ಎಸ್ ಕೊಶ್ಯರಿಗೆ ರವಾನಿಸಿದೆ.
ರಾಜ್ಯಪಾಲರ ಕೋಟಾದಿಂದ ನಾಮನಿರ್ದೇಶನ ಮಾಡಲು ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಇತರ 11 ಜನರ ಹೆಸರನ್ನು ಕಳುಹಿಸಿದೆ. ಈ ಪಟ್ಟಿಯನ್ನು ರಾಜ್ಯಪಾಲರು ಇನ್ನಷ್ಟೇ ಅಂಗೀಕರಿಸಬೇಕಿದೆ.