ಬಳ್ಳಾರಿ, ನ.29 (DaijiworldNews/PY): "ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿಯನ್ನೇ ಅಧಿಕಾರಕ್ಕೆ ತರುವ ಸಲುವಾಗಿ ಸಂಸದರು, ಶಾಸಕರು ಹಾಗೂ ಸಚಿವರು ಕಾರ್ಯಕರ್ತರಂತೆ ದುಡಿಯಲಿದ್ದಾರೆ" ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಗ್ರಾಮ ಸ್ವಾರಜ್ ಅಂಗವಾಗಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮಂಡಲ ಪ್ರಮುಖರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಸಾಮಾನ್ಯ ಕಾರ್ಯಕರ್ತರಿಗೆ ಉನ್ನತ ಸ್ಥಾನಗಳನ್ನು ನೀಡಿದ ಏಕೈಕ ಪಕ್ಷವಾದ ಬಿಜೆಪಿ ದೆಹಲಿಯಿಂದ ಹಳ್ಳಿಯ ತನಕ ಅಧಿಕಾರವನ್ನು ಪಡೆಯುವ ಸಲುವಾಗಿ ಎಲ್ಲಾ ಹಂತದ ಕಾರ್ಯಕರ್ತರ ಸರಪಳಿಯನ್ನು ಭದ್ರಪಡಿಸುತ್ತಿದೆ" ಎಂದಿದ್ದಾರೆ.
"ಡಿ.3ರ ಒಳಗೆ ರಾಜ್ಯದ ಎಲ್ಲಾ 32 ಜಿಲ್ಲೆಗಳಲ್ಲೂ 62 ಅಭಿಯಾನ ಸಭೆಗಳನ್ನು ನಡೆಸುವ ಉದ್ದೇಶದಿಂದ ಆರು ತಂಡಗಳ ರಚನೆಯಾಗಿದೆ" ಎಂದು ತಿಳಸಿದ್ಧಾರೆ.
ಉಸ್ತುವಾರಿ ಸಚಿವ ಆನಂದ್ಸಿಂಗ್ ಮಾತನಾಡಿ, "ಇದು ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ನಿಜ ಮಾಡುವ ಪ್ರಯತ್ನವಾಗಿದೆ. ಎಲ್ಲಾ ಅನುದಾನಗಳು ಸದ್ಬಳಕೆಯಾಗಬೇಕು ಎಂದರೆ ಪಂಚಾಯತ್ ಸದಸ್ಯರಾಗಿ ಬಿಜೆಪಿ ಕಾರ್ಯಕರ್ತರು ಆಯ್ಕೆಯಾಗಬೇಕು" ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು, "ಪಕ್ಷ ಒಡೆಯಲು ವಿರೋಧಿಗಳಿಗೆ ಅವಕಾಶ ಕಲ್ಪಿಸಬಾರದು. ಒಂದು ವೇಳೆ ಪಕ್ಷದಲ್ಲಿ ಗೊಂದಲಗಳಿದ್ದರೆ ಗ್ರಾಮ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಚರ್ಚೆ ನಡೆಸಿ ಗೊಂದಲ ನಿವಾರಿಸಬೇಕು. ಹೀಗಾದಲ್ಲಿ ಮಾತ್ರವೇ ಪಂಚಾಯತ್ಗಳಲ್ಲಿ ಗೆಲುವು ಖಚಿತ" ಎಂದಿದ್ದಾರೆ.