ಬೆಂಗಳೂರು, ನ. 29 (DaijiworldNews/MB) : ಬಿ ಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲಾಗುತ್ತದೆ ಎಂಬ ಊಹಾಪೋಹಗಳ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರವಿವಾರ ಪ್ರಮುಖ ಲಿಂಗಾಯತ ಮಠವಾದ ಚಿತ್ರದುರ್ಗದ ಶ್ರೀ ಮುರುಘಾರಾಜೇಂದ್ರ ಮಠಕ್ಕೆ ತೆರಳಿದರು ಹಾಗೂ ಮುರುಘಾಶ್ರೀ ಪುರಾತತ್ವ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು. ಹಾಗೆಯೇ ಅವರು ಮಠದ ಕಲ್ಲಿನ ಮಂಟಪವನ್ನು ಉದ್ಘಾಟಿಸಿದರು.
ಮುರುಘಾ ಮಠದ ಮಠಾಧೀಶರು, ಶ್ರೀ ಶಿವಮೂರ್ತಿ ಮುರುಘಾರಾಜೇಂದ್ರ ಸ್ವಾಮೀಜಿ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇನ್ನು ಚಿತ್ರದುರ್ಗದಲ್ಲಿ ರೈತರು ಬೆಂಬಲ ಬೆಲೆ ಘೋಷಿಸಿದ ನಂತರ ಮೆಕ್ಕೆಜೋಳ ಖರೀದಿಸಲು ಕೇಂದ್ರವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಬಳಿಕ ಮುಖ್ಯಮಂತ್ರಿ ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ನೀಡಿದರು. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿದರು. ಕಲಾ ಕಾಲೇಜು ಪ್ರವೇಶಾತಿ ಹಾಗೂ ಹಾಸ್ಟೆಲ್ ವಿಸ್ತರಣೆಯನ್ನೂ ಸಹ ಉದ್ಘಾಟಿಸಿದರು.
ಮುಖ್ಯಮಂತ್ರಿಯ ಹಿರಿಯ ಪುತ್ರ ಮತ್ತು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಎಂಎಲ್ಸಿ ಬೋಜೇ ಗೌಡ, ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಸಹ ಕುಲಪತಿ ಎಸ್ ಎಸ್ ಪಾಟೀಲ್ ಹಾಗೂ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಳಿಕ ಮಧ್ಯಾಹ್ನ ಮುಖ್ಯಮಂತ್ರಿಯವರು ಕಿಮ್ಮನೆ ಗಾಲ್ಫ್ ರೆಸಾರ್ಟ್ ಅನ್ನು ಉದ್ಘಾಟಿಸಿದರು. ಸಂಜೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ.