ಜಮ್ಮು, ನ.29 (DaijiworldNews/PY): "ಪಾಕ್ ಸೇನೆಯು ಕದನ ವಿರಾಮ ಉಲ್ಲಂಘನೆ ಮಾಡಿ, ಜಮ್ಮು-ಕಾಶ್ಮೀರ ಕಥುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ಸಮೀಪದ ಮುಂಚೂಣಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ" ಎಂದು ಭಾನುವಾರ ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಹಿರಾನಗರ ಸೆಕ್ಟರ್ನ ಪನ್ಸಾರ್, ಮನ್ಯಾರಿ ಹಾಗೂ ಕರೋಲ್ ಕೃಷ್ಣಾದಲ್ಲಿ ಗಡಿಯುದ್ದಕ್ಕೂ ಶನಿವಾರ ರಾತ್ರಿ 9.50ರ ಸುಮಾರಿಗೆ ಪಾಕ್ ಸೈನ್ಯವು ಗುಂಡಿನ ದಾಳಿ ಪ್ರಾರಂಭಿಸಿದ್ದು, ಇದಕ್ಕೆ ಪ್ರತಿಯಾಗಿ ಗಡು ಭದ್ರತಾ ಪಡೆಗಳು ಕೂಡಾ ದಾಳಿ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ಹೇಳಿದ್ದಾರೆ.
"ಭಾನುವಾರ ಮುಂಜಾನೆ 4.15ರವರೆಗೆ ಉಭಯ ತಂಡಗಳ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ನಮ್ಮ ಕಡೆ ಯಾವುದೇ ಹಾನಿಯಾಗಿಲ್ಲ" ಎಂದಿದ್ದಾರೆ.
"ಪಾಕಿಸ್ತಾನ ಸೈನಿಕರು ಕಳೆದ ಎಂಟು ತಿಂಗಳಿನಿಂದ ಕದನ ವಿರಾಮ ಉಲ್ಲಂಘಿಸಿ ಗಡಿ ಸಮೀಪದ ಹಳ್ಳಿಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದು, ಇದರಿಂದ ಹಳ್ಳಿಗಳ ಜನ ಭಯಭೀತರಾಗಿದ್ದಾರೆ" ಎಂದು ತಿಳಿಸಿದ್ದಾರೆ
ಈ ಬಗ್ಗೆ ಮಾನ್ಯಾರಿ ಗ್ರಾಮದ ನಿವಾಸಿ ಧರಮ್ ಪಾಲ್ ಮಾತಾನಾಡಿದ್ದು, "ಇದರಿಂದ ನಮಗೆ ತುಂಬಾ ಭಯ ಉಂಟಾಗಿದೆ. ಪಾಕ್ ಸೈನ್ಯದ ದಾಳಿಯಿಂದ ಪಾರಾಗಲು ನಾವು ಭೂಗತ ಬಂಕರ್ಗಳಿಗೆ ಸ್ಥಳಾಂತರಗೊಳ್ಳಬೇಕಾಗುತ್ತದೆ" ಎಂದಿದ್ದಾರೆ.