ಲಕ್ನೋ, ನ.29 (DaijiworldNews/PY): ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ ಬಳಿಕ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹೊಸ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಿಸಲಾಗಿದೆ.
"ಯುವತಿಯೋರ್ವರ ತಂದೆ ನೀಡಿದ ದೂರಿನ ಅನ್ವಯ ಬರೇಲಿ ಜಿಲ್ಲೆಯ ದೇವರ್ನಿಯಾ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶರೀಫ್ನಗರ ಗ್ರಾಮದ ಉವೇಶ್ ಅಹ್ಮದ್ ಎನ್ನು ವ್ಯಕ್ತಿ ತನ್ನ ಮಗಳನ್ನು ಮತಾಂತರಗೊಳಿಸಲು ಯತ್ನಿಸುತ್ತಿದ್ದಾನೆ ಎಂದು ದೇವರ್ನಿಯಾ ಠಾಣೆ ವ್ಯಾಪ್ತಿಯ ಶರೀಫ್ನಗರ ಗ್ರಾಮದ ಟೀಕಾರಾಮ್ ಆರೋಪಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ" ಎಂಬುದಾಗಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಲವಂತದ ಅಥವಾ ಅಪ್ರಮಾಣಿಕ ಧಾರ್ಮಿಕ ಮತಾಂತರಗಳನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಶನಿವಾರ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಅಂಕಿತ ಹಾಕಿದ್ದರು.