ಪೊನ್ನಂಪೇಟೆ, ನ.29 (DaijiworldNews/PY): "ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ವಿಡಿಯೋ ದಾಖಲೆಗಳಿದ್ದರೆ ನೀಡಲಿ. ಈ ವಿಚಾರವಾಗಿ ಸುಖಾ ಸುಮ್ಮನೆ ಹೇಳಿಕೆ ನೀಡುವುದು ಬೇಡ. ಡಿಕೆಶಿ ಅವರಿಗೆ ಸುಮ್ಮನೆ ಹೇಳಿಕೆ ನೀಡು ಚಟವಿರಬೇಕು" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂತೋಷ್ ಅವರ ಆತ್ಮಹತ್ಯೆ ಯತ್ನ ಅವರ ವೈಯುಕ್ತಿಕ ವಿಚಾರ. ಈ ಬಗ್ಗೆ ಪಕ್ಷ ಅಥವಾ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಆಡಿಯೋ, ವಿಡಿಯೋ ಇರುವುದಾಗಿ ಡಿಕೆಶಿ ಅವರು ಹೇಳಿದ್ದು, ಪ್ರಕರಣವನ್ನು ರಾಜಕೀಯವಾಗಿ ಪರಿವರ್ತಿಸುವ ಕಾರ್ಯ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಇನ್ನೂ ಎರಡೂವರೆ ವರ್ಷಗಳ ಕಾಲ ಬಿಎಸ್ವೈ ಅವರೇ ಸಿಎಂ ಆಗಿ ಉಳಿಯುತ್ತಾರೆ. ಪಕ್ಷದೊಳಗೆ ಯಾವುದೇ ರೀತಿಯಾದ ಭಿನ್ನಮತವಿಲ್ಲ. ದೆಹಲಿಗೆ ನಾನೂ ಕೂಡಾ ತೆರಳಿದ್ದೆ. ಆದರೆ, ಅಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ಬೆಳವಣಿಗೆಯಾಗಿಲ್ಲ" ಎಂದರು.