ನವದೆಹಲಿ, ನ. 29 (DaijiworldNews/MB) : ''ಶ್ರಮಪಟ್ಟು ದುಡಿಯುವ ಭಾರತದ ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ರವಿವಾರ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ''ಶ್ರಮಪಟ್ಟು ದುಡಿಯುವ ಭಾರತೀಯ ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧ. ಸಂಸತ್ತು ಇತ್ತೀಚೆಗೆ ಕಠಿಣ ಸುಧಾರಣೆಯ ಕೃಷಿ ಸುಧಾರಣಾ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಸುಧಾರಣೆಗಳು ರೈತರ ಸಂಕೋಲೆಗಳನ್ನು ಮುರಿದಿದೆ ಮಾತ್ರವಲ್ಲದೆ ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಿದೆ'' ಎಂದು ಹೇಳಿದ್ದು, ''ಈ ಹೊಸ ಸುಧಾರಣೆಗಳ ಬಗ್ಗೆ ತಮ್ಮ ಹತ್ತಿರದ ಪ್ರದೇಶಗಳಲ್ಲಿನ ರೈತರಿಗೆ ಕೃಷಿ ವಿದ್ಯಾರ್ಥಿಗಳು ತಿಳಿಸಿಬೇಕೆಂದು ನಾನು ಎಲ್ಲಾ ಕೃಷಿ ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತೇನೆ'' ಎಂದು ಹೇಳಿದರು.
''ದೇವಿ ಅನ್ನಪೂರ್ಣಳ ಪುರಾತನ ವಿಗ್ರಹವನ್ನು ಕೆನಡಾದಿಂದ ಭಾರತಕ್ಕೆ ಮರಳಿ ತರಲಾಗುತ್ತಿದೆ ಎಂದು ತಿಳಿದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ. ಸುಮಾರು 100 ವರ್ಷಗಳ ಹಿಂದೆ 1913 ರಲ್ಲಿ ಈ ವಿಗ್ರಹವನ್ನು ವಾರಣಾಸಿಯ ದೇವಸ್ಥಾನವೊಂದರಿಂದ ಕದ್ದು ದೇಶದಿಂದ ಕಳ್ಳಸಾಗಣೆ ಮಾಡಲಾಗಿತ್ತು'' ಎಂದು ತಿಳಿಸಿದರು.
''ಭಾರತದ ಸಂಸ್ಕೃತಿ ಮತ್ತು ಧರ್ಮಗ್ರಂಥವು ಎಂದಿಗೂ ಇಡೀ ಜಗತ್ತನ್ನು ಆಕರ್ಷಿಸುವ ಕೇಂದ್ರವಾಗಿದೆ. ಕೆಲವರು ತಮ್ಮನ್ನು ತಾವು ಕಂಡುಕೊಳ್ಳಲು ಭಾರತಕ್ಕೆ ಬಂದು ಬಳಿಕ ಇಲ್ಲಿಯೇ ಉಳಿದರು. ಕೆಲವರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ತಮ್ಮ ದೇಶಗಳಿಗೆ ಮರಳಿದರು'' ಎಂದು ಪ್ರಧಾನಿ ದೇಶದ ಸಂಸ್ಕೃತಿ ಮತ್ತು ಧರ್ಮಗ್ರಂಥವನ್ನು ಬಗ್ಗೆ ಶ್ಲಾಘಿಸಿದರು. ಹಾಗೆಯೇ ಓರ್ವ ವ್ಯಕ್ತಿಯ ಉದಾಹರಣೆಯನ್ನು ಮೋದಿ ನೀಡಿದರು.
''ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ಬಳಿಕ ಜೋನಸ್ ಎಂಬವರು ಸ್ಟಾಕ್ ಮಾರ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರು ಭಾರತೀಯ ಸಂಸ್ಕೃತಿಯತ್ತ, ವಿಶೇಷವಾಗಿ ವೇದಾಂತದತ್ತ ಆಕರ್ಷಿತರಾದರು. ಅವರು ಭಾರತದಲ್ಲಿ ವೇದಾಂತವನ್ನು ಅಧ್ಯಯನ ಮಾಡಿದರು. ಕೊಯಮತ್ತೂರಿನ ಅರ್ಷಾ ಗುರು ಗುರುಕುಲಂನಲ್ಲಿ 4 ವರ್ಷಗಳನ್ನು ಕಳೆದರು. ಜೋನಸ್ ಅವರ ಪ್ರಯತ್ನಕ್ಕೆ ನಾನು ಅಭಿನಂದಿಸುತ್ತೇನೆ. 'ವಿಶ್ವನಾಥ್' ಎಂದೂ ಕರೆಯಲ್ಪಡುವ ಜೋನಸ್ ಅವರ ಕೆಲಸದ ಬಗ್ಗೆ ನನಗೆ ತಿಳಿಯಿತು. ಪ್ರಸ್ತುತ ಜೋನಸ್ ವೇದಾಂತ ಮತ್ತು ಭಗವದ್ಗೀತೆ ಬಗ್ಗೆ ಪಾಠಗಳನ್ನು ಮಾಡುತ್ತಿದ್ದಾರೆ. ಅವರು 'ವಿಶ್ವವಿದ್ಯಾ' ಎಂಬ ಸಂಘಟನೆಯನ್ನು ನಡೆಸುತ್ತಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
''ನಾಳೆ ನಾವು ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನು ಆಚರಿಸುತ್ತೇವೆ. ಅವರ ಪ್ರಭಾವ ಇಡೀ ಜಗತ್ತಿನಲ್ಲಿ ಸ್ಪಷ್ಟವಾಗಿ ಪ್ರತಿಧ್ವನಿಸುತ್ತದೆ ಎಂದು ಹೇಳಿದರು. ಗುರುನಾನಕ್ ದೇವ್ ಜಿ ಅವರು ಲಂಗಾರು ಸಂಪ್ರದಾಯವನ್ನು ಪ್ರಾರಂಭಿಸಿದರು. ಕೊರೊನಾ ಸಾಂಕ್ರಾಮಿಕ ಸಂದರ್ಭ ಜನರಿಗೆ ಆಹಾರವನ್ನು ನೀಡುವ ಈ ಸಂಪ್ರದಾಯವನ್ನು ಸಿಖ್ ಸಮುದಾಯ ಹೇಗೆ ಮುಂದುವರಿಸಿದೆ'' ಎಂದರು.
''ಲಾಕ್ಡೌನ್ ಸಡಿಲಿಕೆಯಾದ ಬಳಿಕ ಲಸಿಕೆ ಕುರಿತು ಚರ್ಚೆ ಪ್ರಾರಂಭವಾಗಿದೆ. ಆದರೆ ಕೊರೊನಾ ವೈರಸ್ ವಿಚಾರದಲ್ಲಿ ಯಾವುದೇ ಸಡಿಲತೆ ತೋರುವುದು ತುಂಬಾ ಅಪಾಯಕಾರಿ. ನಾವು ವೈರಸ್ ವಿರುದ್ಧ ದೃಢವಾಗಿ ಹೋರಾಡಬೇಕಾಗಿದೆ'' ಎಂದು ಹೇಳಿದರು.