ಬಾಗಲಕೋಟೆ, ನ.29 (DaijiworldNews/PY): "ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮಾಜದ ಸಮಾವೇಶಕ್ಕೆ ಪರೋಕ್ಷವಾದ ಬೆಂಬಲ ನೀಡಿದ್ದು, ಅವರು ಬಾರದೇ ಇರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ" ಎಂದು ಕಾಗಿನೆಲೆ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರಿಗೆ ಕುರುಬ ಸಮಾಜದ ಮೀಸಲಾತಿ ಹೋರಾಟಕ್ಕೆ ಒಪ್ಪಿಗೆ ಇದೆ. ಆದರೆ, ಇಂದು ಅವರು ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ಈ ಸಮಾವೇಶವನ್ನು ಒಪ್ಪಿಗೆಯ ಮೇರೆಗೆ ನಡೆಸುತ್ತಿದ್ದೇವೆ" ಎಂದಿದ್ದಾರೆ.
"ಜ.15ರಂದು ಮೀಸಲಾತಿಗೆ ಆಗ್ರಹಿಸಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಮಾಡಲಿದ್ದೇವೆ. ಫೆ.7ರಂದು ಪಾದಯಾತ್ರೆ ಬೆಂಗಳೂರಿನಲ್ಲಿ ಸೇರಲಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಈ ಸಂದರ್ಭ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಅವರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಈಶ್ವರಪ್ಪ ಅವರ ಪುತ್ರ ಕಾಂತೇಶ ಅವರನ್ನುಈ ಸಮಾವೇಶದ ಮುಖೇನ ಮುನ್ನೆಲೆ ತರಲಾಗುತ್ತಿದೆ ಎನ್ನುವ ವಿಚಾರ ಸುಳ್ಳು" ಎಂದಿದ್ದಾರೆ.