ಹೈದರಾಬಾದ್, ನ. 29 (DaijiworldNews/MB) : ''ಮುಂದಿನ ವಾರ ಹೈದರಾಬಾದ್ ಮಹಾನಗರ ಪಾಲಿಕೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ನ್ನು ಭಾಗ್ಯನಗರ ಎಂದು ಮರು ನಾಮಕರಣ ಮಾಡಲಾಗುವುದು'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಈ ಬಗ್ಗೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ''ನನ್ನ ಬಳಿ ಕೆಲವರು ಹೈದರಾಬಾದ್ ನಗರವನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬಹುದೇ ಎಂದು ಕೇಳುತ್ತಿದ್ದಾರೆ. ಆ ಸಂದರ್ಭದಲ್ಲಿ ನಾನು ಅದೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದೆ'' ಎಂದು ಆದಿತ್ಯನಾಥ್ ಹೇಳಿದ್ದಾರೆ.
''ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಫಿರೋಝಾಬಾದ್ ನಗರವನ್ನು ಅಯೋಧ್ಯೆ ಎಂದು ಹಾಗೂ ಅಲಹಾಬಾದ್ ನಗರವನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಲಾಗಿಲ್ಲವೇ?. ಹಾಗಿರುವಾಗ ಹೈದರಾಬಾದ್ನ್ನು ಯಾಕೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗದು?" ಎಂದು ಪ್ರಶ್ನಿಸಿದ್ದಾರೆ.
''ಆಡಳಿತಾರೂಢ ಟಿಆರ್ಎಸ್ ಮತ್ತು ಅಸಾದುದ್ದೀನ್ ಓವೈಸಿಯ ಎಐಎಂಐಎಂ ಅಪವಿತ್ರ ಮೈತ್ರಿ ಮಾಡಿಕೊಂಡಿವೆ'' ಎಂದು ಕೂಡಾ ಈ ಸಂದರ್ಭದಲ್ಲೇ ಅವರು ಹೇಳಿದರು.
ಇತ್ತೀಚೆಗೆ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಕೂಡಾ, ಹೈದಾರಾಬಾದ್ನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕು ಎಂದು ಹೇಳಿದ್ದರು. ಹಾಗೆಯೇ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿಯನ್ನು ಮುಹಮ್ಮದ್ ಅಲಿ ಜಿನ್ನಾನ ಅವತಾರ ಎಂದು ಹೇಳಿದ್ದರು.