ನವದೆಹಲಿ, ನ. 29 (DaijiworldNews/MB) : ''ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರ ಎಲ್ಲಾ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲು ಕೇಂದ್ರ ಸಿದ್ದವಾಗಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ದೆಹಲಿ ಚಲೋ ನಡೆಸುತ್ತಿದ್ದಾರೆ. ವಿವಿಧ ಭಾಗಗಳಿಂದ ಬಂದ ರೈತರನ್ನು ಮೊದಲಿಗೆ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡದ ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದರು. ಬಳಿಕ ರೈತರಿಗೆ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಿ ನಗರದ ಹೊರವಲಯದ ಬುರಾರಿ ಎಂಬಲ್ಲಿನ ಮೈದಾನದಲ್ಲಿ ಪ್ರತಿಭಟನೆ ನಡೆಸಲು ತಿಳಿಸಿದ್ದರು.
ಈ ವಿಚಾರವಾಗಿ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ, ''ಡಿಸೆಂಬರ್ 3ಕ್ಕಿಂತ ಮೊದಲೇ ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸಲು ಸಿದ್ದವಿದೆ. ರೈತರು ಅನೇಕ ಸ್ಥಳ ಹಾಗೂ ಹೆದ್ದಾರಿಗಳಲ್ಲಿ ತಮ್ಮ ಟ್ರಾಕ್ಟರ್ನಲ್ಲಿ ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಈಗ ನಿಗದಿಪಡಿಸಿರುವ ಮೈದಾನದಲ್ಲಿಯೇ ಪ್ರತಿಭಟನೆ ನಡೆಸಬೇಕು. ಪೊಲೀಸರು ರೈತರನ್ನು ದೊಡ್ಡ ಮೈದಾನಕ್ಕೆ ಸ್ಥಳಾಂತರಿಸಲು ಸಿದ್ದವಿದೆ'' ಎಂದು ಹೇಳಿದರು.
ಇನ್ನು ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದೆಹಲಿ- ಹರ್ಯಾಣ ಭಾರತೀಯ ಕಿಸಾನ್ ಸಂಘದ ಮುಖಂಡ ಜಗಜಿತ್ ಸಿಂಗ್, ''ಸರ್ಕಾರವು ಯಾವುದೇ ಷರತ್ತು ವಿಧಿಸದೆ ತೆರೆದ ಮನಸ್ಸಿನಿಂದ ಮಾತುಕತೆ ನಡೆಸಬೇಕು. ನಾಳೆ ಬೆಳಿಗ್ಗೆ ನಮ್ಮ ಪ್ರತಿಕ್ರಿಯೆ ಬಗ್ಗೆ ಸಭೆ ನಡೆಸಿ ನಿರ್ಧರಿಸಲಾಗುವುದು'' ಎಂದು ಶನಿವಾರ ತಿಳಿಸಿದ್ದಾರೆ.