ಬೆಂಗಳೂರು, ನ. 29 (DaijiworldNews/MB) : ''ಕನ್ನಡವನ್ನು ಹಾಳುಮಾಡುವ ಏಕೈಕ ಮುಖ್ಯಮಂತ್ರಿ ಇದ್ದರೆ ಅದು ಬಿಎಸ್ ಯಡಿಯೂರಪ್ಪ. ಸುಳ್ಳು ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಸುಳ್ಳು'' ಎಂದು ಸಿಎಂ ವಿರುದ್ದ ಟೀಕೆ ಮಾಡಿರುವ ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ''ಹಿಂದೆ ಎಂದೂ ನಡೆಯದ ರೀತಿಯಲ್ಲಿ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ನಡೆಯಲಿದೆ. ಬಂದ್ನಲ್ಲಿ 1,400 ಕನ್ನಡಪರ ಸಂಘಟನೆಗಳು ಭಾಗವಹಿಸಲಿದೆ'' ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮರಾಠ ಪ್ರಾಧಿಕಾರ, ನಿಗಮಗಳು ಬಸವಕಲ್ಯಾಣ ಉಪಚುನಾವಣೆಗಾಗಿ ಯಡಿಯೂರಪ್ಪ ಆಡುತ್ತಿರುವ ನಾಟಕ. ಅವರು ಸುಳ್ಳಿನ ನಾಯಕ. ಅವರನ್ನು ಯಾರೂ ನಂಬಬೇಡಿ'' ಎಂದು ಹೇಳಿದರು.
''ಯಡಿಯೂರಪ್ಪ ಬಳ್ಳಾರಿಯನ್ನು ಎರಡು ಭಾಗ ಮಾಡಿದ್ದಾರೆ. ಅವರೇ ಸಿಎಂ ಆಗಿದ್ದರೆ ನಿಪ್ಪಾಣಿ, ಕಾರವಾರ ಮತ್ತು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿದೆ'' ಎಂದು ವಾಟಾಳ್ ನಾಗರಾಜ್ ಸಿಎಂ ಬಿಎಸ್ವೈ ವಿರುದ್ದ ವಾಗ್ದಾಳಿ ನಡೆಸಿದರು.