ನವದೆಹಲಿ,ನ. 28 (DaijiworldNews/HR): ಜೈಲಿನಲ್ಲಿರುವ ಬುಡಕಟ್ಟು ಸಮುದಾಯದ ಹೋರಾಟಗಾರ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸ್ಟ್ಯಾನ್ ಸ್ವಾಮಿ(83 ) ಅವರಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸಲು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್ಪಿಆರ್ಡಿ ನಿರ್ಧರಿಸಿದೆ.
ಅಕ್ಟೋಬರ್ 8ರಂದು ರಾಂಚಿಯ ಅವರ ನಿವಾಸದಿಂದ ಎಲ್ಗಾರ್ ಪರಿಷತ್ ಪ್ರಕರಣದ ಸಂಬಂಧ ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಿ ಮುಂಬೈನ ತಲೋಜಾ ಜೈಲಿನಲ್ಲಿ ಇಡಲಾಗಿದೆ.
ಇನ್ನು ಸ್ಟ್ಯಾನ್ ಸ್ವಾಮಿ ಅವರು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ನನಗೆ ಲೋಟ ಹಿಡಿಯಲಾಗದು. ಹೀಗಾಗಿ, ಸ್ಟ್ರಾ ಅಥವಾ ಸಿಪ್ಪರ್ ಒದಗಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಪ್ರತಿಕ್ರಿಯೆ ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಸೂಚಿಸಿತ್ತು. ಅರ್ಜಿಯು ವಿಚಾರಣೆ ಡಿ.4ರಂದು ನಡೆಯಲಿದೆ.
ಜೈಲಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸಲು ಮುಂದಾಗಿರುವ ಸೇವಾ ಸಂಸ್ಥೆ ಎನ್ಪಿಆರ್ಡಿ, ಇನ್ನಷ್ಟು ದಿನ ಸ್ವಾಮಿ ಅವರು ಈ ನೋವನ್ನು ಸಹಿಸಿಕೊಳ್ಳಲಾಗದು. ದೀರ್ಘ ಕಾಲ ಅವರು ದ್ರವ ಪದಾರ್ಥ ಸೇವಿಸದಂತೆ ನಿರಾಕರಿಸಲೂ ಆಗದು. ಹೀಗಾಗಿ, ಜೈಲಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.