ರಾಯಚೂರು, ನ.28 (DaijiworldNews/PY): ಸಿಎಂ ಅವರ ರಾಜಕೀಯ ಸಲಹೆಗಾರ ಸಂತೋಷ್ ಅವರ ಆತ್ಮಹತ್ಯೆಗೆ ವಿಡಿಯೋ ಕಾರಣ ಎಂದು ಡಿ.ಕೆ.ಶಿವಕುಮಾರ್ ಹೇಳಿರುವಂತೆ "ಸಂತೋಷ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆ ವಿಡಿಯೋವನ್ನು ನೀಡುವ ಕಾರ್ಯ ಮಾಡಲಿ. ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂತೋಷ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಘಟನೆಯ ಬಗ್ಗೆ ಸದಾಶಿವ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲಾಗುವುದು" ಎಂದಿದ್ದಾರೆ.
"ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಸೇರಿದಂತೆ ವ್ಯವಸ್ಥೆಯ ಆಧುನೀಕರಣದ ಮೊದಲ ಭಾಗ ಮುಕ್ತಾಯವಾಗಿದ್ದು, ಕೆಲವು ಬಾಕಿ ಉಳಿದಿದೆ. ಈ ಕಾರ್ಯಕ್ಕಾಗಿ ಕೆಕೆಆರ್ಡಿಬಿಯಿಂದಲೂ ಈ ಭಾಗದಲ್ಲಿ ಅನುಕೂಲ ದೊರಕಿಸಲು ಅನುದಾನ ಪಡೆಯಲಾಗುತ್ತದೆ" ಎಂದು ಹೇಳಿದ್ದಾರೆ.