ಶ್ರೀನಗರ, ನ.28 (DaijiworldNews/PY): "ಜಮ್ಮು-ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಯ ಪ್ರಥಮ ಹಂತದ ಚುನಾವಣೆ ಶನಿವಾರ ಪ್ರಾರಂಭವಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್, ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಗಳ ಅಭ್ಯರ್ಥಿಗ ನಡುವೆ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಹಾಗೂ ಮಾಜಿ ಹಣಕಾಸು ಸಚಿವ ಅಲ್ತಾಫ್ ಬುಖಾರಿ ಅವರ ಅಪ್ನಿ ಪಾರ್ಟಿ ಕಣದಲ್ಲಿದೆ.
"ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನದ ಪ್ರಕ್ರಿಯೆ ಆರಂಭವಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ 1,475 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಲಿ 296 ಅಭ್ಯರ್ಥಿಗಳ ಡಿಡಿಸಿ ಚುನಾವಣೆಯ ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಜಮ್ಮುವಿನ 18 ಹಾಗೂ ಕಾಶ್ಮೀರದ 25 ಸ್ಥಾನಗಳು ಸೇರಿದಂತೆ 43 ಕ್ಷೇತ್ರಗಳಿಗಾಗಿ ಇಂದು ಮತದಾನ ನಡೆಯುತ್ತಿದೆ.
"ಪಂಚಾಯತ್ಗಳ ಚುನಾವಣೆಯಲ್ಲಿ ಪಂಚ್ ಸ್ಥಾನಗಳಿಗಾಗಿ 899 ಅಭ್ಯರ್ಥಿಗಳು ಹಾಗೂ ಸರ್ಪಂಚ್ ಸ್ಥಾನಗಳಿಗಾಗಿ 280 ಮಂದಿ ಸ್ಪರ್ಧಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಸುಮಾರು 2,644 ಮತಗಟ್ಟೆಗಳಲ್ಲಿ ನಡೆಯಲಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.