ಕಾರವಾರ, ನ.28 (DaijiworldNews/PY): "ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರೆ ಎಫ್ಐಆರ್ ಏಕೆ ದಾಖಲಿಸಿಲ್ಲ?. ನಳಿನ್ ಕುಮಾರ್ ಕಟೀಲ್ ಅವರಿಗೆ ಏನೋ ಹೆಚ್ಚು ಕಮ್ಮಿ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಶಿರಸಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಮ್ಮ ಸ್ಥಾನಕ್ಕೆ ಸರಿಯಾಗಿ ಗೌರವ ನೀಡುವುದನ್ನು ನಳಿನ್ ಅವರು ಕಲಿತುಕೊಳ್ಳಲಿ. ಈ ರೀತಿಯಾದ ಮಾತುಗಳಿಂದ ಅವರ ಸ್ಥಾನಕ್ಕೆ ಕಳಂಕ ಬರುತ್ತದೆ. ಅವರಿಗೆ ರಾಜಕೀಯದ ಬಗ್ಗೆ ಸ್ವಲ್ಪವಾದರೂ ಜ್ಞಾನವಿದೆ ಎಂದು ತಿಳಿದುಕೊಂಡಿದ್ದೆ" ಎಂದರು.
"ಯಾವುದೋ ಸಣ್ಣ ನಟಿಯರನ್ನು ಜೈಲಿಗೆ ಹಾಕಿದ್ದಾರೆ. ಅವರು ಎಫ್ಐಆರ್ ದಾಖಲಿಸಿ ನೋಡೋಣ. ನಮ್ಮಲ್ಲಿ ಇದ್ದಷ್ಟು ಮಂದಿ ಅವರ ಸರ್ಕಾರದಲ್ಲಿಯೂ ಇದ್ದಾರೆ. ಅವರ ಮೇಲು ಕೂಡಾ ದೂರು ದಾಖಲಿಸಲಿ" ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ನಯಕತ್ವ ಬದಲಾವಣೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಾವು ಬಿಜೆಪಿಯವರ ಆಂತರಿಕ ವಿಚಾರದಲ್ಲಿ ತಲೆಹಾಕಲ್ಲ. ಯಾರನ್ನು ಬೇಕಾದರೂ ಸರ್ಕಾರದಲ್ಲಿ ಉಳಿಸಿಕೊಳ್ಳಲಿ ಅಥವಾ ತೆಗೆದುಹಾಕಲಿ. ಇದರಿಂದ ನಮಗೇನು ಇಲ್ಲ. ಆದರೆ, ನಮ್ಮ ಪಕ್ಷದಿಂದ ಬಿಜೆಪಿಗೆ ಹೋದವರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ" ಎಂದು ತಿಳಿಸಿದರು.
ಸಿಬಿಐ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಎಲ್ಲಾ ತನಿಖೆಗೂ ಕೂಡಾ ನಾನು ಸಹಕರಿಸುತ್ತೇನೆ. ನಾನು ತಪ್ಪು ಮಾಡಿಲ್ಲ. ಹಾಗಾಗಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ" ಎಂದರು.