ಮುಂಬೈ, ನ.28 (DaijiworldNews/PY): "ಬಿಜೆಪಿ ನನ್ನ ಕುಟುಂಬದ ಮೇಲೆ ಹಲ್ಲೆ ಮಾಡಿದೆ ಆದರೆ, ನಾನು ಅವರ ಮಟ್ಟಕ್ಕೆ ಇಳಿಯುವುದಿಲ್ಲ" ಎಂದು ಮಹಾರಾಷ್ಟ್ರದ ಸಿಂಎ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ತಮಗೂ ಕುಟುಂಬ ಹಾಗೂ ಮಕ್ಕಳಿರುವುದನ್ನು ಬಿಜೆಪಿ ನೆನಪಿನಲ್ಲಿಟ್ಟುಕೊಳ್ಳಬೇಕು. ಅವರನ್ನು ಎದುರಿಸುವುದು ಹೇಗೆ ಎಂದು ನಮಗೆ ತಿಳಿದಿದೆ" ಎಂದಿದ್ದಾರೆ.
"ದ್ವೇಷದ ರಾಜಕೀಯಕ್ಕೆ ಅಂತ್ಯವಿಲ್ಲ ಎಂಬತಾಗಿದೆ. ನನಗೆ ಹಗೆ ರಾಜಕೀಯದ ಹಾದಿ ಹಿಡಿಯಲು ಇಷ್ಟವಿಲ್ಲ. ಈ ಕೊಳಕು ರಾಜಿಕೀಯವನ್ನು ಮೊದಲು ನಿಲ್ಲಿಸಿ" ಎಂದು ಹೇಳಿದ್ದಾರೆ.
"ನಮ್ಮ ಸರ್ಕಾರಕ್ಕೆ ಜನರ ಆಶೀರ್ವಾದವಿದೆ. ಸಿಬಿಐ, ಇಡಿಯಂತಹ ತನಿಖೆಗಳಿಂದ ಸರ್ಕಾರವನ್ನು ಕುಗ್ಗಿಸುವ ಕೀಳಾದ ರಾಜಕೀಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ" ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.