ಚನ್ನಪಟ್ಟಣ, ನ.28 (DaijiworldNews/PY): "ಸಿಎಂ ಬಿಎಸ್ವೈ ಅವರು ಯಾರನ್ನಾದರೂ ಮಂತ್ರಿ ಮಾಡಲಿ. ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಜಿಲ್ಲೆಯ ನಾಲ್ವರನ್ನು ಸಿಎಂ ಬಿಎಸ್ವೈ ಅವರು ಮಂತ್ರಿ ಮಾಡಲಿ. ಯಾರನ್ನು ಕೂಡಾ ಮಂತ್ರಿ ಮಾಡಬೇಡಿ ಎಂದು ಹೇಳುವ ಕೀಳುಮಟ್ಟಕ್ಕೆ ನಾನು ಹೋಗುವುದಿಲ್ಲ" ಎಂದಿದ್ದಾರೆ.
"ಸಿಎಂ ಬಿಎಸ್ವೈ ಅವರನ್ನು ಕ್ಷೇರ್ರದ ಅಭಿವೃದ್ಧಿಯ ವಿಚಾರವಾಗಿ ಮಾತನಾಡುವ ಸಲುವಾಗಿ ಭೇಟಿ ಮಾಡಿದ್ದೆ. ಯಾರನ್ನಾದರೂ ಮಂತ್ರಿ ಮಾಡಿ ಎಂದು ಹೇಳಲು ನಾನು ಭೇಟಿ ಆಗಿಲ್ಲ. ಬಡವರ ಭೂಮಿಯನ್ನು ಕಬಳಿಸಲು ಮುಂದಾವರು ಮಂತ್ರಿಯಾಗಲು ಹೊರಟಿದ್ದಾರೆ. ಯಾರೋ ಮುಖ್ಯಮಂತ್ರಿ ಆದರೆ, ನಾನು ಏಕೆ ಹೆದರಿಕೊಳ್ಳಬೇಕು?" ಎಂದು ತಿಳಿಸಿದ್ದಾರೆ.
"ರಾಜಕೀಯ ವಿಚಾರದ ಬಗ್ಗೆ ಚರ್ಚೆನಡೆಸಲು ನಾನು ಸಿಎಂ ಅವರನ್ನು ಭೇಟಿ ಮಾಡಿಲ್ಲ. ಬದಲಾಗಿ, ನನ್ನ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸುವ ಬಗ್ಗೆ ಭೇಟಿ ಮಾಡಿದ್ದೆ. ಆದರೆ, ಕೆಲವು ಮಂತ್ರಿ ಮಾಡಬೇಡಿ ಎಂದು ಹೇಳಲು ಸಿಎಂ ಅವರನ್ನು ಭೇಟಿಯಾಗಿದ್ದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಂತವರು ಮಂತ್ರಿ ಆದರೇನು, ಬಿಟ್ಟರೇನು. ನಾನು ನನ್ನ ಕಾರ್ಯವನ್ನು ನಿರ್ವಹಿಸುತ್ತೇನೆ" ಎಂದು ಹೇಳಿದ್ದಾರೆ.
ಲಿಂಗಾಯತ ಸಮುದಾಯವನ್ನು ಒಬಿಸಿಎ ಸೇರ್ಪಡೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರವಾಗಿ ಚರ್ಚೆ ನಡೆಸುವುದಿಲ್ಲ" ಎಂದಿದ್ದಾರೆ.