ನವದೆಹಲಿ, ನ.28 (DaijiworldNews/PY): "ಲವ್ ಜಿಹಾದ್ ಎಂಬುದು ಸುಳ್ಳು ಕಲ್ಪನೆಯಾಗಿದೆ" ಎಂದು ಜನಪ್ರಿಯ ಖ್ಯಾತ ಲೇಖಕ ಚೇತನ್ ಭಗತ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಲವ್ ಜಿಹಾದ್ ಎನ್ನುವುದು ಕೆಲವು ಹಿಂದೂಗಳಲ್ಲಿರುವ ಭೀತಿಯಿಂದ ಸೃಷ್ಠಿಯಾದ ಪದ. ಈ ವಿಚಾರದ ಬಗೆ ಸೃಷ್ಠಿಯಾದ ಆತಂಕಗಳನ್ನು ಪರಿಹರಿಸಬೇಕಾದುದು ಮುಖ್ಯವಾಗಿದೆ. ಅಂತರ್ಧರ್ಮೀಯ ವಿವಾಹಗಳು ಕಡಿಮೆ ಸಂಖ್ಯೆಯಲ್ಲಿ ಆಗುತ್ತಿದ್ದು, ಇವುಗಳ ಪೈಕಿ ಕೆಲವೇ ಪ್ರಕರಣಗಳಲ್ಲಿ ಮಾತ್ರವೇ ಮದುಮಗ ಮುಸ್ಲಿಂ ಆಗಿದ್ದಲ್ಲಿ, ಆಕೆಯ ಕುಟುಂಬದವರು ಹುಡುಗಿಯನ್ನು ಇಸ್ಲಾಂ ಧರ್ಮವನ್ನು ಸ್ವೀಕಾರ ಮಾಡುವಂತೆ ಹೇಳಿರುವಂತಹ ನಿದರ್ಶನಗಳಿವೆ" ಎಂದಿದ್ದಾರೆ.
"ಭಾರತದ ಅಭಿವೃದ್ಧಿಯ ಅವಕಾಶಗಳಿಗೆ ಬಲಪಂಥೀಯ ಹಿಂದೂವಾದವು ಬೆದರಿಕೆಯೊಡ್ಡುತ್ತಿವೆ. ಅಲ್ಲದೇ, ಬಲಪಂಥೀಯ ಹಿಂದುತ್ವವಾದಿಗಳು ಅಶಿಸ್ತಿನವರಾಗಿದ್ದಾರೆ. ಹಾಗಾಗಿ ಅವರು ಆಗಾಗ ಮುಸ್ಲಿಮರ ಮೇಲೆ ದಾಳಿ ಮಾಡುತ್ತಿರುತ್ತಾರೆ" ಎಂದು ತಿಳಿಸಿದ್ದಾರೆ.
"ಹಿಂದೂರಾಷ್ಟ್ರವಾದ ಕಾರಣ ಭಾರತಕ್ಕೆ ಉತ್ತಮವಾದ ಭವಿಷ್ಯ ಸಿಗಲಾರದು. ಈ ಸರ್ಕಾರದ ಹೆಸರನ್ನು ಹಾಳುಮಾಡುವಲ್ಲಿ ಬಲಪಂಥೀಯ ಹಿಂದೂಗಳು ಸಫಲರಾಗಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೊಂದಲದಲ್ಲಿ ಸಿಲುಕಿದ್ದಾರೆ. ಸರ್ಕಾರದ ಚುನಾವಣೆಯಲ್ಲಿ ಬಲಪಂಥೀಯಯರು ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಘೋಷಣೆ ಮಾಡಿರುವ ಬಿಜೆಪಿ ಮುಸ್ಲಿಮರನ್ನು ಅನ್ಯಾಯವಾಗಿ ನಡೆಸಿಕೊಳ್ಳುತ್ತದೆ. ಮುಸ್ಲಿಮರನ್ನು ಬಹುತೇಕ ಹಿಂದೂಗಳು ಸಮಾನವಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ತಿಳಿಸಿದ್ದಾರೆ.
"ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಮಾತ್ರವೇ ಪ್ರಬಲವಾದ ಪ್ರತಿಪಕ್ಷವಾಗಲು ಸಾಧ್ಯ. ಪ್ರಜಾತಾಂತ್ರಿಕವಾಗಿ ತನ್ನ ನಾಯಕನನ್ನು ಆಯ್ಕೆ ಮಾಡುವ ಮುಖೇನ ಕಾಂಗ್ರೆಸ್ ತನ್ನ ಶಕ್ತಿಯನ್ನು ಪುನರುಜ್ಜೀವನಗೊಳಿಸಬೇಕಿದೆ. ಕಾಂಗ್ರೆಸ್ಗೆ ನರೇಂದ್ರ ಮೋದಿ ಅವರಂತ ಸರಿಸಮಾನವಾದ ವ್ಯಕ್ತಿಯ ಅಗತ್ಯವಿದೆ" ಎಂದು ಹೇಳಿದ್ದಾರೆ.