ಪಾಟ್ನಾ, ನ. 27 (DaijiworldNews/MB) : ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಆರೋಪ ಮಾಡಿದ ಆರ್ಜೆಡಿ ಮುಖಂಡ ತೇಜಸ್ವಿ ಪ್ರಸಾದ್ ಯಾದವ್ ವಿರುದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಕಿಡಿಕಾರಿದ್ದಾರೆ. ತೇಜಸ್ವಿ ನನ್ನ ಸಹೋದರ ಸಮಾನರಾದ ಸ್ನೇಹಿತನ ಪುತ್ರನೆಂದು ಸುಮ್ಮನಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತೀಶ್ ಕುಮಾರ್ ಅವರು 7ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಕೋಲಾಹಲಕ್ಕೆ ಬಿಹಾರ ವಿಧಾನಸಭೆ ಸಾಕ್ಷಿಯಾಯಿತು.
ವಿಧಾನಸಭೆಯಲ್ಲಿ ತೇಜಸ್ವಿ ಯಾದವ್ ವಿರುದ್ದ ವಾಗ್ದಾಳಿ ನಡೆಸಿದ ನಿತೀಶ್, ''ಅವರು ಮೂರ್ಖತನದ ಮಾತುಗಳನ್ನು ಆಡುತ್ತಿದ್ದಾರೆ. ಸುಳ್ಳು ಹೇಳುತ್ತಿದ್ದಾರೆ. ನನ್ನ ಸಹೋದರ ಸಮಾನನಾದ ಸ್ನೇಹಿತನ ಮಗ ಎಂದು ನಾನು ಸುಮ್ಮನಿದ್ದೆ'' ಎಂದು ಹೇಳಿದ್ದಾರೆ.
''ಅವರ ತಂದೆಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿದ್ದು ಯಾರು ಗೊತ್ತೆ?, ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರೆಂದು ತಿಳಿದಿದೆಯೇ?'' ಎಂದು ಕೇಳಿರುವ ಅವರು, ''ಅವರ ವಿರುದ್ದ ಆರೋಪಗಳು ಕೇಳಿ ಬಂದಾಗ ನಾನು ಆ ಬಗ್ಗೆ ವಿವರಿಸುವಂತೆ ಹೇಳಿದ್ದೆ. ಆದರೆ ಅವರು ವಿವರಿಸಿಲ್ಲ'' ಎಂದು ತೇಜಸ್ವಿ ಯಾದವ್ ತಂದೆ ಲಾಲೂ ಪ್ರಸಾದ್ ಯಾದವ್ ಬಗ್ಗೆ ಹೇಳಿದ್ದಾರೆ.