ಬೆಂಗಳೂರು, ನ. 27 (DaijiworldNews/MB) : ''ಅನ್ನಕೊಡುವ ರೈತರ ಮೇಲೆ ದೌರ್ಜನ್ಯ ಖಂಡನೀಯ, ಇದೇನಾ ಸಬ್ ಕಾ ಸಾಥ್, ಸಬ್ ಕಾ ವಿಕಾಸ್?'' ಎಂದು ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯರವರು ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಕಾರ್ಯಕ್ರಮ ನಡೆಸುತ್ತಿದ್ದು ಪೊಲೀಸರು ಪ್ರತಿಭಟನನಿತರ ರೈತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಈ ವಿಚಾರವಾಗಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೃಷಿ ವಿರೋಧಿ ಕಾಯ್ದೆಗಳು ಮತ್ತು ವಿದ್ಯುತ್ ಮಸೂದೆಯ ರದ್ದತಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ 'ದಿಲ್ಲಿ ಚಲೋ' ಪ್ರತಿಭಟನೆಯನ್ನು ಪೊಲೀಸರ ಮೂಲಕ ದಮನಿಸಲು ಪ್ರಯತ್ನಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಪ್ರಧಾನಿ ತಕ್ಷಣ ರೈತ ಮುಖಂಡರನ್ನು ಕರೆದು ಮಾತುಕತೆ ನಡೆಸಬೇಕು'' ಎಂದು ಆಗ್ರಹಿಸಿದ್ದಾರೆ.
''ಸರ್ಕಾರದ ಬೊಕ್ಕಸ ದೋಚುತ್ತಿರುವ ಕಾರ್ಪೊರೇಟ್ ಧಣಿಗಳಿಗೆ ಕೆಂಪುಗಂಬಳಿ ಹಾಸಿ ಆತಿಥ್ಯ ನೀಡುವ ನರೇಂದ್ರ ಮೋದಿ ಸರ್ಕಾರ, ನ್ಯಾಯ ಕೇಳುತ್ತಿರುವ ಅನ್ನಕೊಡುವ ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯ. ಇದೇನಾ ಸಬ್ ಕಾ ಸಾಥ್, ಸಬ್ ಕಾ ವಿಕಾಸ್?'' ಎಂದು ಪ್ರಶ್ನಿಸಿದ್ದಾರೆ.