ನವದೆಹಲಿ, ನ. 27 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ''ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ರೈತ ವಿರೋಧಿಯಾದ ಈ ಮೂರು ಕಾಯ್ದೆಗಳನ್ನು ರದ್ದು ಮಾಡಲಾಗುವುದು'' ಎಂದು ಹೇಳಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು, ''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೂರು ರೈತ-ವಿರೋಧಿ ನೀತಿಗಳನ್ನು ರದ್ದು ಮಾಡಲಾಗುತ್ತದೆ. ನಮ್ಮ ಪಕ್ಷವು ಮೊದಲಿನಿಂದಲ್ಲೇ ಈ ಕಾಯ್ದೆಯನ್ನು ವಿರೋಧಿಸುತ್ತಿತ್ತು'' ಎಂದು ಹೇಳಿದ್ದಾರೆ.
''ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ರೈತರು ಸೇರಿದವರಲ್ಲ. ಎಲ್ಲರ ಹಸಿವು ನೀಗಿಸುವ ಸಲುವಾಗಿ ಅವರು ದುಡಿಯುತ್ತಾರೆ. ಅವರ ಈ ಬೇಡಿಕೆಯತ್ತ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಹೇಳಿರುವ ಅವರು, ನಾವು ಅಧಿಕಾರಕ್ಕೆ ಬಂದ ಕೂಡಲೇ ಈ ಕಾನೂನನ್ನು ಕಿತ್ತೆಸೆದು ಹೊಸ ಕಾನೂನು ರಚನೆ ಮಾಡಲಾಗುವುದು'' ಎಂದಿದ್ದಾರೆ.