ಬೆಳಗಾವಿ, ನ. 27 (DaijiworldNews/HR): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಚ್. ಈಶ್ವರಪ್ಪ ಅವರಿಗೆ ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ದೊರಕಿಸುವ ನಿಟ್ಟಿನಲ್ಲಿ ನಿಜವಾಗಿಯೂ ಕಾಳಜಿ ಇದ್ದರೆ, ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಬೇಕು ಎಂದು ಸಂಗೊಳ್ಳಿರಾಯಣ್ಣ ಸ್ಮಾರಕ ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಶ್ವರಪ್ಪನವರು ಗಡುವಿನಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಘೋಷಿಸಬೇಕು. ಎ.ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಕೂಡ ಇದೇ ಹಾದಿ ಹಿಡಿಯಬೇಕು" ಎಂದರು.
ಇನ್ನು "ಈಶ್ವರಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಈ ವಿಷಯದ ಬಗ್ಗೆ ವಿಧಾನಸಭೆ ಅಥವಾ ವಿಧಾನಪರಿಷತ್ನಲ್ಲಿ ಒಮ್ಮೆಯೂ ಚರ್ಚಿಸಿಲ್ಲ. ಎರಡೂ ಕಡೆಯೂ ಬಿಜೆಪಿ ಸರ್ಕಾರವೇ ಇದೆ ಹಾಗಾಗಿ ಸರ್ಕಾರ ಮನಸ್ಸು ಮಾಡಿದರೆ ತಿಂಗಳಲ್ಲಿ ಮೀಸಲಾತಿ ಕೊಡಬಹುದು. ಅದರ ಬದಲಿಗೆ, ಹೋರಾಟದ ನಾಟಕ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಈಶ್ವರಪ್ಪ ಅವರು ಯಡಿಯೂರಪ್ಪ ಅವರೊಂದಿಗೆ ಜಗಳವಾದಾಗೆಲ್ಲಾ ಸಮಾಜ ಮುಂದಿಟ್ಟುಕೊಂಡು ಬೀದಿಗೆ ಬರುತ್ತಾರೆ. ಆರ್ಎಸ್ಎಸ್ನವರು ಹಾಗೂ ಬಿ.ಎಲ್. ಸಂತೋಷ್ ಮೆಚ್ಚಿಸಲು ಈ ನಾಟಕ ಕಂಪನಿ ಹುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.