ಮುಂಬೈ, ನ. 27 (DaijiworldNews/MB) : ಮುಂಬೈನಲ್ಲಿರುವ ನಟಿ ಕಂಗನಾ ರಣಾವತ್ಗೆ ಸೇರಿರುವ ಕಚೇರಿಯ ಅಕ್ರಮವೆಂದು ಹೇಳಿ ಅದರ ನೆಲಸಮಕ್ಕೆ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ನೀಡಿದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ. ಹಾಗೆಯೇ ಬಿಎಂಸಿಯ ಈ ಆದೇಶ ದುರುದ್ದೇಶದಿಂದ ಕೂಡಿದೆ ಎಂದು ಕೋರ್ಟ್ ಹೇಳಿದೆ.
ನಾಗರಿಕರ ಹಕ್ಕುಗಳ ವಿರುದ್ಧ ತಪ್ಪಾಗಿ ಎಂಸಿಜಿಎಂ(ಗ್ರೇಟರ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್) ಕ್ರಮ ತೆಗೆದುಕೊಂಡಿದ್ದು ಇದು ಕಾನೂನಿನ ದುರುಪಯೋಗ. ಅಧಿಕಾರಿಗಳು ಯಾವುದೇ ನಾಗರಿಕರ ಮೇಲೆ ತಮ್ಮ ತೋಲ್ಭಳವನ್ನು ಪ್ರದರ್ಶಿಸಲು ಮುಂದಾಗುವುದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆಯೇ ಬಿಎಂಸಿಯ ಈ ಕ್ರಮದ ವಿರುದ್ದ ಪರಿಹಾರ ಪಡೆಯುವ ಅರ್ಹತೆ ಕಂಗನಾಗೆ ಇದೆ ಎಂದು ತನ್ನ ಆದೇಶದಲ್ಲಿ ಬಾಂಬೆ ಹೈಕೋರ್ಟ್ ತಿಳಿಸಿದೆ.
ಸೆಪ್ಟಂಬರ್ 19 ರಂದು ಬಿಎಂಸಿ ಕಂಗನಾಗೆ ಸೇರಿದ ಬಂಗಲೆಯಲ್ಲಿದ್ದ ಕಚೇರಿಯ ಭಾಗವನ್ನು ಭಾಗರ್ಶ ಧ್ವಂಸಗೊಳಿಸಿತ್ತು. ಆಡಳಿತರೂಢ ಶಿವಸೇನೆ ಹಾಗೂ ಮಹಾರಾಷ್ಟ್ರ ಸರಕಾರದ ವಿರುದ್ದ ನಾನು ಹೇಳಿಕೆ ನೀಡಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಕಂಗನಾ ಆರೋಪಿಸಿದ್ದರು.
ಇನ್ನು ಕಂಗನಾ ತನ್ನ ಕಟ್ಟಡ ಧ್ವಂಸಗೊಳಿಸಿದ ಕಾರಣದಿಂದಾಗಿ ಮುನ್ಸಿಪಲ್ ಏಜೆನ್ಸಿಯಿಂದ 2 ಕೋಟಿ ರೂ. ಪರಿಹಾರ ಕೋರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಯಾಲಯವು, ಈ ವಿಚಾರವಾಗಿ ನ್ಯಾಯಾಲಯ ಓರ್ವ ಮೌಲ್ಯಮಾಪಕರನ್ನು ನೇಮಿಸುತ್ತದೆ. ಕಟ್ಟಡ ನೆಲಸಮದಿಂದ ಕಂಗನಾಗೆ ಆಗಿರುವ ನಷ್ಟದ ಬಗ್ಗೆ ಅವರು ಪರಿಶೀಲನೆ ನಡೆಸಲಿದ್ದಾರೆ. ಮಾರ್ಚ್ 2021ರೊಳಗೆ ಮೌಲ್ಯಮಾಪಕರು ಪರಿಹಾರದ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದೆ.