ನವದೆಹಲಿ,ನ. 27 (DaijiworldNews/HR): ದೆಹಲಿಯಲ್ಲಿ ರೈತ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ತೀವ್ರವಾಗಿದ್ದು, ಕೇಂದ್ರ ಸರ್ಕಾರವು ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ದೆಹಲಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸುವುದಕ್ಕಾಗಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಬೇಕು" ಎಂದರು.
ಕೇಂದ್ರ ಸರ್ಕಾರ ನೂತನವಾಗಿ ತಂದಿರುವ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಪಂಜಾಬ್ನ ರೈತರು ನಡೆಸುತ್ತಿರುವ "ದೆಹಲಿ ಚಲೊ" ಪ್ರತಿಭಟನಾ ಮೆರವಣಿಗೆ ತಡೆಯುವ ಪ್ರಯತ್ನ ನಡೆಸಲಾಗಿದೆ.
ದೆಹಲಿ-ಬಹದ್ದೂರ್ಗಢ ಹೆದ್ದಾರಿ ಬಳಿಯ ಟಿಕ್ರಿ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದ್ದಾರೆ.