ಮುಂಬೈ, ನ. 27 (DaijiworldNews/MB) : ''ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ದುರದೃಷ್ಟಕರ, ಆದರೆ ಕೆಲವರು ಈ ವಿಚಾರದಲ್ಲೇ ನೀಚ ರಾಜಕೀಯ ಮಾಡುತ್ತಿದ್ದಾರೆ'' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕ, ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಸಂದರ್ಶನದಲ್ಲಿ ಮಾತನಾಡಿರುವ ಅವರು, ''ಯುವ ಪ್ರತಿಭಾವಂತ ನಟ ಸಾವನ್ನಪ್ಪಿರುವುದು ದುರದೃಷ್ಟಕರ. ಆದರೆ ಕೆಲವರು ಈ ವಿಚಾರದಲ್ಲೇ ಕೊಳಕು, ನೀಚ ರಾಜಕೀಯ ಮಾಡುತ್ತಿದ್ದಾರೆ'' ಎಂದು ದೂರಿದ್ದಾರೆ.
''ಒಂದು ಜೀವ ಹೋಗಿದೆ. ಆದರೆ ನೀವು ಆ ವಿಚಾರದಲ್ಲೇ ಕೊಳಕು ರಾಜಕೀಯಕ್ಕೆ ಇಳಿದಿದ್ದೀರಿ. ಇದು ಸರಿಯೇ'' ಎಂದು ವಿಪಕ್ಷ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಕಳೆದ ಜೂನ್ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಅಪಾರ್ಟ್ ಮೆಂಟ್ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಪತ್ತೆಯಾಗಿದ್ದು ಸುಶಾಂತ್ ಅಭಿಮಾನಿಗಳು ಹಾಗೂ ಕೆಲವು ನಟ, ನಟಿಯರು ಹಾಗೂ ಬಿಜೆಪಿಯು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಇದೀಗ ಈ ಸಾವು ಪ್ರಕರಣವು ಹಲವು ತಿರುವುಗಳನ್ನು ಪಡೆದಿದ್ದು ಪ್ರಸ್ತುತ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವು ಕೂಡಾ ಡ್ರಗ್, ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿಯೂ ತನಿಖೆ ನಡೆಸುತ್ತಿದೆ.