ಬೆಂಗಳೂರು, ನ.27 (DaijiworldNews/PY): ಹೊಸ ಜಿಲ್ಲೆಯಾದ ವಿಜಯನಗರಕ್ಕೆ ಜಿಲ್ಲಾಕೇಂದ್ರವನ್ನಾಗಿ ಹೊಸಪೇಟೆಯನ್ನು ಮಾಡುವ ಹಾಗೂ ಆರು ತಾಲೂಕುಗಳನ್ನು ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿದ್ದ ಹೂವಿನ ಹಡಗಲಿ, ಹರಪನಹಳ್ಳಿ, ಹೊಸಪೇಟೆ ಸೇರಿದಂತೆ ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು ಈ ಆರು ತಾಲೂಕುಗಳನ್ನು ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲು ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 11 ತಾಲೂಕುಗಳು ಹಾಗೂ ಮೂರು ಕಂದಾಯ ಉಪವಿಭಾಗಗಳಿದ್ದವು. ಇದೀಗ ಆರು ತಾಲೂಕುಗಳನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿದ್ದು, ಉಳಿದಂತೆ ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಕಂಪ್ಲಿ ಸೇರಿದಂತೆ ಸಿರಗುಪ್ಪ , ಕುರಗೋಡು ಹಾಗೂ ಸಂಡೂರು ತಾಲೂಕುಗಳು ಬಳ್ಳಾರಿ ಜಿಲ್ಲೆಯ ತಾಲೂಕಾಗಿವೆ.