ನವದೆಹಲಿ, ನ. 27 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣೆಗೆಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾಗಿರುವ ರೈತರನ್ನು ಇರಿಸಲು ಸ್ಟೇಡಿಯಂನ್ನು ತಾತ್ಕಲಿಕವಾಗಿ ಜೈಲಾಗಿ ಮಾರ್ಪಡಿಸಲು ದೆಹಲಿ ಪೊಲೀಸರು ಆಡಳಿತಾರೂಢ ಆಮ್ ಆದ್ಮಿ ಸರ್ಕಾರಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಪೊಲೀಸರು ರಾಷ್ಟ್ರ ರಾಜಧಾನಿಯ 9 ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲಾಗಿ ಮಾರ್ಪಡಿಸಲು ದೆಹಲಿ ಸರ್ಕಾರದ ಬಳಿ ಅನುಮತಿ ಕೋರಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಕೊರೊನಾ ಪರಿಣಾಮ ದೆಹಲಿಯಲ್ಲಿ ಯಾವುದೇ ರ್ಯಾಲಿ ಹಾಗೂ ಧರಣೆ ಮಾಡಲು ಅನುಮತಿಯಿಲ್ಲ. ಆದರೂ ಕೂಡಾ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಚದುರಿಸಲು ಅಶ್ರುವಾಯು ಬಳಸುತ್ತಿದ್ದೇವೆ. ಆದರೂ ಕೂಡಾ ಅವರು ದೆಹಲಿಗೆ ಪ್ರವೇಶಿಸಲು ಯತ್ನಿಸಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರು ಅಮೃತಸರದಿಂದ ದೆಹಲಿಗೆ ತೆರಳಲು ಶುಕ್ರವಾರ ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. 4-5 ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಅಗತ್ಯ ವಸ್ತುಗಳನ್ನು ಅವರು ಟ್ರ್ಯಾಕ್ಟರ್ಗಳಲ್ಲಿ ತುಂಬಿಸಿಕೊಂಡು ದೆಹಲಿಗೆ ತೆರಳಿರುವುದಾಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದದ ರೈತರ ಹೋರಾಟ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಹೆಚ್ಚಾಗಿದೆ.