ಶ್ರೀನಗರ, ನ. 27 (DaijiworldNews/HR): ನನ್ನನ್ನುಅಕ್ರಮವಾಗಿ ಮತ್ತೆ ವಶಕ್ಕೆ ಪಡೆದಿದ್ದು, ನನ್ನ ಮಗಳು ಇಲ್ಟಿಜಾಳನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರ್ಯಾಟಿಕ್ ಪಕ್ಷದ ನಾಯಕಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
"ನನ್ನನ್ನು ಮತ್ತೆ ಕಳೆದ ಎರಡು ದಿನಗಳಿಂದ ಅಕ್ರಮವಾಗಿ ವಶಕ್ಕೆ ಪಡೆದಿದ್ದು, ಪುಲ್ವಾಮಾದಲ್ಲಿರುವ ಪೀಪಲ್ಸ್ ಡೆಮಾಕ್ರ್ಯಾಟಿಕ್ ಪಕ್ಷದ ಯುವ ಘಟಕದ ಅಧ್ಯಕ್ಷ ವಾಹೀದ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ಜಮ್ಮು-ಕಾಶ್ಮೀರ ಆಡಳಿತ ಅನುಮತಿ ನೀಡಲು ನಿರಾಕರಿಸುತ್ತಿದೆ" ಎಂದರು.
ವಾಹೀದ್ ಉರ್ ರೆಹಮಾನ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ನನಗೆ ಅವಕಾಶ ಕೊಡುತ್ತಿಲ್ಲ ಎಂದು ಮುಫ್ತಿ ದೂರಿದ್ದಾರೆ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ನಾವೀದ್ ಬಾಬು ಜತೆ ಸಂಪರ್ಕ ಇರುವ ಆರೋಪದಡಿ ವಾಹೀದ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.
ಇನ್ನು ಬಿಜೆಪಿಯ ಸಚಿವರು ಮತ್ತು ಅವರಿಗೆ ಸಂಭಂಧಿಸಿದವರು ಕಾಶ್ಮೀರದ ಪ್ರತಿಯೊಂದು ಮೂಲೆಗೂ ಭೇಟಿ ನೀಡುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಇದೆ ಎಂದು ಹೇಳುತ್ತಿರುವುದಾಗಿ ಮುಫ್ತಿ ದೂರಿದ್ದಾರೆ.