ಶ್ರೀನಗರ, ನ. 27 (DaijiworldNews/HR): ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗೆ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಥಳೀಯರಿಗೆ ಶೇ 100 ರಷ್ಟು ಮೀಸಲಾತಿಯೊಂದಿಗೆ 70,000 ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ನವೆಂಬರ್ 28 ರಿಂದ ಡಿಸೆಂಬರ್ 22 ರವರೆಗೆ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯು ಇದೇ ಮೊದಲ ಬಾರಿಗೆ ನಡೆಯಲಿದ್ದು, 20 ಜಿಲ್ಲೆಗಳಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಒಟ್ಟು 280 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.
ಈ ಪ್ರಣಾಲಿಕೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ದೇವಿಂದರ್ ಸಿಂಗ್ ಮಾನ್ಯಲ್ ಹಾಗೂ ಪಕ್ಷದ ಮುಖ್ಯ ವಕ್ತಾರ ವಕೀಲ ಸುನಿಲ್ ಸೇಥಿ ಬಿಡುಗಡೆ ಮಾಡಿದ್ದಾರೆ.
ಇನ್ನು ಈ ಪ್ರಣಾಳಿಕೆಯ ಪ್ರಕಾರ, 70,000 ಉದ್ಯೋಗಗಳನ್ನು ಒದಗಿಸಲಾಗುತ್ತಿದೆ. ಸರ್ಕಾರಿ ಉದ್ಯೋಗಗಳನ್ನು ಶೇ 100ರಷ್ಟು ಸ್ಥಳೀಯರಿಗೆ ಮೀಸಲಿಡುವ ನಿರ್ಧಾರದಿಂದಾಗಿ ಸ್ಥಳೀಯರಿಗೆ ಪ್ರಯೋಜನವಾಗಲಿದೆ ಎಂದು ತಿಳಿದು ಬಂದಿದೆ.