ನವದೆಹಲಿ, ನ.27 (DaijiworldNews/PY): "ರಾಜ್ಯದಲ್ಲಿ ಎಲ್ಲಿಯೂ ಕೂಡಾ ವಿಧವಾ ಹಾಗೂ ವೃದ್ಧಾಪ್ಯ ವೇತನ ಹಂಚಿಕೆ ಸ್ಥಗಿತಗೊಂಡಿಲ್ಲ. ಬದಲಾಗಿ, ಬೋಗಸ್ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅರ್ಹರ ಬ್ಯಾಂಕ್ ಖಾತೆಗೆ ಪಿಂಚಣಿ ಜಮಾ ಮಾಡುವ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ವಿರೋಧ ಪಕ್ಷಗಳ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಎರಡರಿಂದ ಮೂರು ತಿಂಗಳುಗಳ ಕಾಲ ಪಿಂಚಣಿಯನ್ನು ಅಂಚೆ ಕಚೇರಿಯವರು ತಡವಾಗಿ ಹಂಚುತ್ತಿರುವ ವಿಚಾರ ತಿಳಿದುಬಂದಿದೆ. ಅಲ್ಲದೇ ಪಿಂಚಣಿ ವಿತರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಬೋಗಸ್ ಫಲಾನುಭವಿಗಳನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಅರ್ಹರಿಗೆ ಪಿಂಚಣಿ ತಲುಪಿಸುವುದನ್ನು ಅಂಚೆ ಕಚೇರಿ ಸಿಬ್ಬಂದಿಗಳು ವಿಳಂಬ ಮಾಡುತ್ತಿರುವ ವಿಚಾರ ತಿಳಿದ ಬಳಿಕ ಮುಂಬರುವ ಒಂದೂವರೆ ತಿಂಗಳಲ್ಲಿ ಅಂಚೆ ಕಚೇರಿ ಸಂಪರ್ಕ ತಪ್ಪಿಸಿ, ನೇರವಾಗಿ ಬ್ಯಾಂಕ್ ಖಾತೆಗೆ ಪಿಂಚಣಿ ಜಮಾ ಮಾಡಲಾಗುತ್ತದೆ. ರಾಜ್ಯದಲ್ಲಿ ಶೇ.3 ರಿಂದ 4ರಷ್ಟು ಬೋಗಸ್ ಫಲಾನುಭವಿಗಳು ಪತ್ತೆಯಾಗಿದ್ದಾರೆ" ಎಂದಿದ್ದಾರೆ.
"ಇಲ್ಲಿಯವರೆಗೆ ಶೇ.98ರಷ್ಟು ಫಲಾನುಭವಿಗಳ ಬ್ಯಾಂಕ್ ಮತ್ತು ಪಿಂಚಣಿ ಖಾತೆಗಳನ್ನು ಆಧಾರ್ನೊಂದಿಗೆ ಜೋಡಿಸುವ ಕೆಲಸ ಸಂಪೂರ್ಣವಾಗಿದೆ" ಎಂದು ತಿಳಿಸಿದ್ದಾರೆ.