ಬೆಂಗಳೂರು, ನ. 26 (DaijiworldNews/SM): ಬಹುನಿರೀಕ್ಷಿತ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಈ ಸೂಚನೆಯನ್ನು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ನೀಡಿದ್ದಾರೆ. ಈ ನಡುವೆ ಶುಕ್ರವಾರದಂದು ಸಚಿವ ಸಂಪುಟ ಸಭೆ ಕರೆದಿದ್ದು, ತೀವ್ರ ಕುತೂಹಲಕ್ಕೆ ಮೂಡಿಸಿದೆ.
ಈಗಾಗಲೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಇದರ ಬೆನ್ನಲ್ಲೇ, ಇದೀಗ ಸಚಿವ ಸಂಪುಟ ವಿಸ್ತರಣೆಯ ಕೂಗು ಕೇಳಿಸಲಾರಂಭಿಸಿದೆ. ಎಂಟಿಬಿ ನಾಗರಾಜ್, ಆರ್ ಶಂಕರ್ ಮತ್ತು ಮುನಿರತ್ನ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಗಳಿವೆ ಎಂಬುವುದಾಗಿ ಮುಖ್ಯಮಂತ್ರಿಯವರ ಆಪ್ತ ಮೂಲಗಳು ತಿಳಿಸಿವೆ.
ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಮುಖ್ಯಮಂತ್ರಿ, ಒಂದು ಅಥವಾ ಎರಡು ದಿನಗಳಲ್ಲಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸುವ ಆಲೋಚನೆ ಹೊಂದಿರುವುದಾಗಿ ಸುಳಿವು ನೀಡಿದ್ದಾರೆ. ಇದು ಬಿಜೆಪಿಯೊಳಗಿನ ಅಬ್ಬರಕ್ಕೆ ಕಾರಣವಾಗಿದೆ. ಮೂವರನ್ನು ಸಂಪುಟಕ್ಕೆ ಸೇರಿಸುವ ಮೂಲಕ ಯಡಿಯೂರಪ್ಪ ಅವರು ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಲು ಬಯಸುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಲು ಮುಂದಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳುಗಳಲ್ಲಿ, ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ಅನುಮತಿ ಕೋರಿ ಎರಡು ಬಾರಿ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿದ್ದಾರೆ. ಆದರೆ ಹೈಕಮಾಂಡ್ ನಿಂದ ಸ್ಪಷ್ಟವಾದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಅದರ ಜೊತೆಯಲ್ಲೇ ಉಪಚುನಾವಣೆ ಫಲಿತಾಂಶದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಆದರೂ ಹೈಕಮಾಂಡ್ ಹಸಿರು ನಿಶಾನೆ ತೋರಿಸಿಲ್ಲ. ಆದರೆ, ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಾಯಕತ್ವ ಬದಲಾವಣೆಗಳ ಗೊಂದಲ ಹಾಗೂ ಪಕ್ಷದಲ್ಲಿ ತಲೆದೋರಿರುವ ಆಂತರಿಕ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಸಂಜೆ 4 ಗಂಟೆಗೆ ಬಿಜೆಪಿ ಸಂಸದರ ತುರ್ತು ಸಭೆ ಕರೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.