ತುಮಕೂರು, ನ.26 (DaijiworldNews/PY): "ಬಿಜೆಪಿ ಸರ್ಕಾರದಲ್ಲಿ ಮಹಿಳಾ ಸಚಿವೆಯಾಗಿ ಇರುವವಳು ನಾನು ಒಬ್ಬಳೇ. ಸಚಿವ ಸ್ಥಾನವನ್ನು ನಾನೇ ಏಕೆ ತ್ಯಾಗ ಮಾಡಬೇಕು?" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನೇ ಏಕೆ ಸಚಿವ ಸ್ಥಾನವನ್ನು ತ್ಯಾಗ ಮಾಡಬೇಕು?. ಎರಡನೇ ಸಲವೂ ಸಚಿವ ಸಂಪುಟ ವಿಸ್ತರಣೆಯ ವಿಚಾರ ಬಂದಾಗಲೂ ಕೂಡಾ ನನ್ನನ್ನು ಮಾತ್ರವೇ ಗುರಿ ಮಾಡಲಾಗುತ್ತಿದೆ. ನನಗೆ ಸಚಿವ ಸ್ಥಾನ ತ್ಯಾಗದ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಕಡೆಯಿಂದ ಯಾವುದೇ ಸೂಚನೆ ಬಂದಿಲ್ಲ" ಎಂದಿದ್ದಾರೆ.
"ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಂದ ನನಗೆ ಸೂಚನೆ ಸಿಕ್ಕಿಲ್ಲ. ಆದರೆ, ಈ ವಿಚಾರ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ. ಈ ಹಿಂದೆಯೂ ಕೂಡಾ ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿತ್ತು. ಆದರೆ, ಈ ವಿಚಾರ ಸುಳ್ಳಾಗಿತ್ತು. ಇದೀಗ ಮೂರನೇ ಬಾರಿಯೂ ಈ ಸುದ್ದಿ ಬಂದಿದ್ದು, ಇದೂ ಸುಳ್ಳಾಗಲಿದೆ. ಮಹಿಳೆಯರನ್ನೇ ಏಕೆ ಗುರಿ ಮಾಡಲಾಗುತ್ತಿದೆ?" ಎಂದು ಕೇಳಿದರು.
"ಈ ವಿಚಾರವಾಗಿ ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ" ಎಂದು ತಿಳಿಸಿದ್ದಾರೆ.