ಬೆಂಗಳೂರು, ನ.26 (DaijiworldNews/PY): ಬಿಜೆಪಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಕಾರ್ಯ ಮಾಡುವುದು ಬೇಡ. ಅವರದು ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲುವ ಎನ್ನುವ ನೀತಿ. ಅವರು ಜಾತಿ ಗಣತಿಯನ್ನು ಒಮ್ಮೆ ಪರಿಶೀಲಿಸಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಒಡೆದ ಮನೆಯೆಂದು ರೇಣುಕಾಚಾರ್ಯ ಹೇಳಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದೆಡೆ ರೇಣುಕಾಚಾರ್ಯ ಅವರು ಸಭೆ ನಡೆಸಿದರೆ, ಮತ್ತೊಂಡು ಕಡೆ ಜಾರಕಿಹೊಳಿ ಅವರು ಸಭೆ ನಡೆಸಿದ್ದಾರೆ. ಇದರಿಂದ ಯಾರ ಮನೆ ಒಡೆದು ಹೋಗಿದೆ ಎಂದು ತಿಳಿಯುತ್ತದೆ ಎಂದರು.
ಬಿಜೆಪಿಯಲ್ಲಿ ಎಲ್ಲರೂ ಕೂಡಾ ಒಂದಾಗಿದ್ದರೆ ಎರಡೆರಡು ಕಡೆ ಸಭೆ ನಡೆಸುವ ಅವಶ್ಯಕತೆ ಏನಿತ್ತು?. ಇದನ್ನು ಗಟ್ಟಿಯಾದ ಮಡಿಕೆ ಎಂದು ಕರೆಯಬೇಕಾ? ಎಂದು ಕೇಳಿದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಾಹಿತಿಯ ಅನುಸಾರ ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದೆ. ಆದರೆ, ಅವರೇ ಉಳಿದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಅವರು ಯಾವುದೇ ಕಾರ್ಯ ಮಾಡುತ್ತಿಲ್ಲ. ಕೆಲಸ ಮಾಡುವವರು ಸಿಎಂ ಆಗಲಿ ಎಂದು ಹೇಳಿದರು.