ಚೆನ್ನೈ, ನ. 26 (DaijiworldNews/MB) : ''ನಿವಾರ್ ಚಂಡಮಾರುತ ಪರಿಣಾಮದಿಂದಾಗಿ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ತಮಿಳುನಾಡಿನಲ್ಲಿ ಮೂವರು ಮೃತಪಟ್ಟಿದ್ದಾರೆ'' ಎಂದು ತಮಿಳುನಾಡಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತುಲ್ಯ ಮಿಶ್ರಾ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಅವರು, ''ತಮಿಳುನಾಡಿನಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. 101 ಗುಡಿಸಲುಗಳಿಗೆ ಹಾನಿಯಾಗಿದ್ದು 380 ಮರಗಳು ಧರಶಾಹಿಯಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.
''ಧರೆಗುರುಳಿದ ಮರಗಳನ್ನು ತೆರವುಗೊಳಿಸಲಾಗಿದೆ. ಅಗತ್ಯ ಸೇವೆಗಳ ಸಂಪೂರ್ಣ ಪುನಃಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.
''ತೀವ್ರ ಸ್ವರೂಪದಲ್ಲಿದ್ದ ನಿವಾರ್ ಚಂಡಮಾರುತ ಉತ್ತರ ಕರಾವಳಿ ತಮಿಳುನಾಡಿನ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಇದು ವಾಯುವ್ಯ ದಿಕ್ಕಿನಲ್ಲಿ ಸಾಗಿದೆ. ಮುಂದಿನ 06 ಗಂಟೆಗಳಲ್ಲಿ ಈ ಚಂಡಮಾರುತ ದುರ್ಬಲವಾಗುತ್ತದೆ'' ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.