ಮೈಸೂರು, ನ.26 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ಥಿತಿ ಮುಳ್ಳಿನ ಮೇಲಿನ ಬಟ್ಟೆಯಂತಾಗಿದೆ. ಅವರಿಗೆ ತಾಳ್ಮೆ ಬೇಕು" ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಿಎಸ್ವೈ ಅವರಿಗೆ ಬುದ್ಧಿವಂತಿಕೆ ಹಾಗೂ ತಾಳ್ಮೆ ಮುಖ್ಯ. ಮುಖ್ಯಮಂತ್ರಿ ಎಂದ ಮೇಲೆ ಒತ್ತಡ ಸಹಜ" "ಎಂದರು.
ಸಿಎಂ ಬಿಎಸ್ವೈ ಅವರು ಬದಲಾಗಿದ್ದಾರೆ ಎಂದು ಹೇಳುತ್ತಿಲ್ಲ. ಆದರೂ, ಅವರು ಬದಲಾಗಿಲ್ಲ ಎಂದು ಹೇಳುವುದು ಕೂಡಾ ಕಷ್ಟ. ಅಧಿಕಾರಕ್ಕೆ ಬಂದ ಬಳಿಕ ಬದಲಾವಣೆಯಾಗೋದು ಸಹಜ. ಸಿದ್ದರಾಮಯ್ಯ ಅವರಿಗೆ ಅಧಿಕಾರವಿತ್ತು. ಆದರೆ, ಅವರಿಗೆ ಬುದ್ಧಿವಂತಿಕೆ ಇರಲಿಲ್ಲ. ಈ ಕಾರಣದಿಂದ ಅವರು ಅಧಿಕಾರ ಕಳೆದುಕೊಂಡರು" ಎಂದು ತಿಳಿಸಿದರು.
ನಿಗಮ ಮಂಡಳಿಗಳಿಗೆ ನೇಮಕ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಎಲ್ಲರ ಬಳಿ ಚರ್ಚೆ ಮಾಡಿ ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಮಂಡಳಿ ಹಾಗೂ ನಿಗಮಗಳಿಗೆ ಅವರಿಗೆ ಬೇಕಾದವರನ್ನು ನೇಮಿಸಿಕೊಂಡಿದ್ದಾರೆ. ಈ ವಿಚಾರ ಬೇಸರವನ್ನುಂಟು ಮಾಡಿದೆ" ಎಂದರು.
"ತಿಹಾರ್ ಜೈಲಿಗೆ ಹೋಗಿ ಬಂದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಜನರು ಹೇಗೆ ಓಟು ಹಾಕಲು ಸಾಧ್ಯ? ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ" ಲೇವಡಿ ಮಾಡಿದರು.
ಕೇಂದ್ರ ಸಚಿವ ಸ್ಥಾನವಕಾಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಚುನಾವಣೆ ಸಾಕು ಎಂದು ನಾನು ತೀರ್ಮಾನ ಮಾಡಿದ್ದೇನೆ. ನನಗೆ ಯಾವುದೇ ಮಂತ್ರಿಗಿರಿ ಬೇಡ. ಭ್ರಷ್ಟನಾಗದೇ ನನ್ನ ಕಾರ್ಯವನ್ನು ನಿರ್ವಹಿಸಿರುವ ತೃಪ್ತಿ ನನಗೆ ಇದೆ" ಎಂದು ಹೇಳಿದರು.