ನವದೆಹಲಿ, ನ.26(DaijiworldNews/PY): ವಿಶ್ವದ ಕೆಲವೆಡೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಡಿ.31ರ ತನಕ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
"ಕಾರ್ಗೊ ವಿಮಾನಗಳ ಹಾರಾಟಕ್ಕೆ ಹಾಗೂ ಮಹಾನಿರ್ದೇಶನಾಲಯದ ಅನುಮತಿ ಪಡೆದಂತ ಇತರ ವಿಮಾನಗಳ ಹಾರಾಟಕ್ಕೆ ಈ ನಿರ್ಬಂಧ ಅನ್ವಯಿಸುವುದಿಲ್ಲ" ಎಂದು ತಿಳಿಸಿದೆ.
"ಆಯಾಯ ಪ್ರಕರಣಗಳನ್ನು ಆಧರಿಸಿ ನಿರ್ದಿಷ್ಟ ಪ್ರಾಧಿಕಾರಗಳು ಸೀಮಿತ ಮಾರ್ಗಗಳಲ್ಲಿ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಅನುಮತಿಸಬಹುದಾಗಿದೆ" ಎಂದು ಡಿಜಿಸಿಎ ತಿಳಿಸಿದೆ.
ಕೊರೊನಾ ಹಿನ್ನೆಲೆ ಮಾರ್ಚ್ 23ರಿಂದ ಭಾರತದಲ್ಲಿ ಅಂತರಾಷ್ಟ್ರೀಯ ವಿಮಾನಗಳ ಸೇವೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಆದರೆ, ಮೇ ತಿಂಗಳ ಬಳಿಕ ಕೆಲವೊಂದು ವಿಶೇಷ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ಕಲ್ಪಿಸಲಾಗಿತ್ತು. ಜುಲೈನಿಂದ ಆಯ್ದ ದೇಶಗಳೊಂದಿಗೆ ಭಾರತ ಏರ್ ಬಬಲ್ ವ್ಯವಸ್ಥೆ ಹೊಂದಿದ್ದ ವಿಮಾನ ಹಾರಾಟಕ್ಕೆ ಅನುಮತಿ ದೊರಕಿತ್ತು.
ಕೊರೊನಾ ಪರಿಸ್ಥಿತಿಯ ಎರಡು ತಿಂಗಳ ಅಂತರದ ಬಳಿಕ ಮೇ 25ರಿಂದ ಭಾರತದಲ್ಲಿ ದೇಶೀಯ ವಿಮಾನ ಸೇವೆಗಳು ಪುನರಾರಂಭಗೊಂಡವು.