ಮುಂಬೈ, ನ. 26 (DaijiworldNews/MB) : ಮುಂಬೈ ಭಯೋತ್ಪಾದಕ ದಾಳಿ ಕೃತ್ಯ ನಡೆದು ಗುರುವಾರಕ್ಕೆ 12 ವರ್ಷವಾಗಿದ್ದು 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧರ ತ್ಯಾಗ ಸ್ಮರಿಸಿ ಗುರುವಾರ ಗೌರವ ನಮನ ಸಲ್ಲಿಸಲಾಯಿತು.
ಪೊಲೀಸ್ ಕೇಂದ್ರ ಕಚೇರಿ ಆವರಣದಲ್ಲಿನ ಹುತಾತ್ಮರ ನೂತನ ಸ್ಮಾರಕಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶಮುಖ್, ಪರಿಸರ ಸಚಿವ ಅದಿತ್ಯ ಠಾಕ್ರೆ ನಮನ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಹುತಾತ್ಮರ ಕುಟುಂಬ ಸದಸ್ಯರೂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಂಬೈ ಪೊಲೀಸ್ ಕಮೀಷನರ್ ಪರಂ ವೀರ್ ಸಿಂಗ್, ಯೋಧರ ತ್ಯಾಗ ಇತಿಹಾಸದಿಂದ ಎಂದೂ ಮರೆಯಾಗಲಾರದು. ನಮ್ಮ ಉಳಿವಿಗಾಗಿ ಹುತಾತ್ಮರಾದ ಯೋಧರಿಗೆ ನಮ್ಮ ನಮನ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹೇಳಿದರು.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ದಾಳಿಯಲ್ಲಿ ಮೃತರಾದ ಹುತಾತ್ಮರ ಕುಟುಂಬ ಸದಸ್ಯರಿಗೆ ನಮ್ಮ ಸಂತಾಪಗಳು. ನಾವು ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಇನ್ನಷ್ಟು ಬಲತುಂಬಬೇಕಿದೆ ಎಂದು ಹೇಳಿದರು.
ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಬಂದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಒಬೆರಾಯ್ ಟ್ರಿಡೆಂಟ್ ತಾರಾ ಹೋಟೆಲ್, ಲಿಯೊಪೊಲ್ಡ್ ಕೆಫೆ, ಕ್ಯಾಮಾ ಹಾಸ್ಪಿಟಲ್, ನಾರಿಮನ್ ಹೌಸ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸುಮಾರು 60 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದ್ದು 18 ಭದ್ರತಾ ಸಿಬ್ಬಂದಿ ಸೇರಿ 166 ಜನರು ಮೃತಪಟ್ಟಿದ್ದರು. ಈ ವೇಳೆ ಒಂಬತ್ತು ಉಗ್ರರನ್ನು ಹತ್ಯೆ ಮಾಡಲಾಗಿದೆ. ದಾಳಿಯಲ್ಲಿ ಜೀವಂತವಾಗಿ ವಶಕ್ಕೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್ನನ್ನು, 2012ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಒಳಪಡಿಸಲಾಗಿತ್ತು.