ಬೆಂಗಳೂರು, ನ.26(DaijiworldNews/PY): "ರಾಜ್ಯದಲ್ಲಿ ಆಸ್ತಿ ಸಂಪಾದನೆ ಮಾಡಿರುವ ನಾನು ಮಾತ್ರನಾ? ಯಾರ ಮೇಲೂ ನಡೆಯದ ತನಿಖೆ ನನ್ನ ಮೇಲೆ ಯಾಕೆ? ರಾಜಕೀಯ ದ್ವೇಷದಿಂದ ನನ್ನ ವಿರುದ್ದ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ" ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಡಿ.ಕೆ.ಶಿವಕುಮಾರ್ ಅವರೇ, ಅಕ್ರಮ ಆಸ್ತಿ ಸಂಪಾದಿಸಿದ್ದೇನೆ ಎಂದು ಒಪ್ಪಿಕೊಂಡಿರುವುದಕ್ಕಾಗಿ ಧನ್ಯವಾದಗಳು. ನೀವಿಷ್ಟು ಬಹಿರಂಗವಾಗಿಯೇ ತಪ್ಪನ್ನು ಒಪ್ಪಿಕೊಂಡ ಮೇಲೂ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರವನ್ನು ದೂರುತ್ತೀರುವುದೇಕೆ? ಮಾಡಿದ್ದುಣ್ಣೋ ಮಹಾರಾಯ" ಎಂದು ಲೇವಡಿ ಮಾಡಿದೆ.
ಬುಧವಾರ ನಗರದಲ್ಲಿ ಮಾತನಾಡಿದ್ದ ಡಿಕೆಶಿ ಅವರು, "ನನ್ನ ಮೇಲೆ ರಾಜಕೀಯ ದ್ವೇಷದಿಂದ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನೇನು ಮಾಡಬಾರದ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಇಲ್ಲಿಯವರೆಗೆ ಯಾರೇ ಮೇಲೆಯೂ ಕೂಡಾ ಈ ರೀತಿಯಾಗಿ ತನಿಖೆಯಾಗಿಲ್ಲ. ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ನನ್ನ ವಿರುದ್ದ ಮಾತ್ರವೇ ತನಿಖೆ ಮಾಡಲಾಗುತ್ತಿದೆ. ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯೇ? ಅಥವಾ ಯಾವುದಾದರೂ ಆರೋ ಸಾಬೀತಾಗಿದೆಯೋ? ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾರೆ. ಈ ಎಲ್ಲಾ ವಿಚಾರದ ಬಗ್ಗೆ ತನಿಖೆ ಮಾಡಿಸಲಿ" ಎಂದಿದ್ದರು.