ಹೈದರಾಬಾದ್, ನ. 26 (DaijiworldNews/MB) : ''ನಗರದ ಓಲ್ಡ್ ಸಿಟಿಯಲ್ಲಿ ನೆಲೆಸಿರುವ ಬಾಂಗ್ಲಾದೇಶ, ರೋಹಿಂಗ್ಯಾ ಹಾಗೂ ಪಾಕಿಸ್ತಾನದ ವಲಸಿಗರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು. ಈ ಮೂಲಕ ಅವರನ್ನು ಹೊರ ಹಾಕಲಾಗುವುದು'' ಎಂದು ಹೇಳಿದ್ದ ಬಿಜೆಪಿ ಮುಖಂಡ ಬಂಡಿ ಸಂಜಯ್ಗೆ ತಿರುಗೇಟು ನೀಡಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ''ಹೈದರಾಬಾದ್ನಲ್ಲಿ ಪಾಕಿಸ್ತಾನಿಗಳು ಇದ್ದರೆ, ಅದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ'' ಎಂದು ಹೇಳಿದ್ದಾರೆ.
''ಓಲ್ಡ್ ಸಿಟಿಯಲ್ಲಿ ಪಾಕಿಸ್ತಾನಿಗಳು ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದಕ್ಕೆ ಕಾರಣ. ಅವರು ನಿದ್ದೆಯಲ್ಲಿ ಇರುವುದು ಅವರ ವೈಫಲ್ಯ, ಪಾಕಿಸ್ತಾನಿಗಳು ಇಲ್ಲಿಗೆ ಬಂದಿದ್ದಾರೆ. ಆದರೆ ನಾನು ಅವರನ್ನು ಇಲ್ಲಿ ನೋಡಿಲ್ಲ. ಬಿಜೆಪಿಗರು ಹಿಂದೂ ಮುಸ್ಲಿಂ ನಡುವೆ ಗೋಡೆ ನಿರ್ಮಿಸಲು ಬಯಸುತ್ತಾರೆ'' ಎಂದು ಅವರು ದೂರುತ್ತಾರೆ.
ಮಲೈಕ್ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, "ಬಿಹಾರದಂತೆ ಇಲ್ಲಿಗೂ ಮೋದಿಯನ್ನು ಚುನಾವಣೆ ಪ್ರಚಾರಕ್ಕೆ ಕರೆತನ್ನಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ನೋಡೋಣ. ಬಿಹಾರದಲ್ಲಿ, 2019 ರ ಸಂಸತ್ ಚುನಾವಣೆಯ ಸಂದರ್ಭ, ಬಿಜೆಪಿ 222 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆದರೆ ಈಗ ನೀವು ಒಂದೂವರೆ ವರ್ಷದ ನಂತರ ವಿಧಾನಸಭಾ ಚುನಾವಣೆಯಲ್ಲಿ 75 ಸ್ಥಾನಗಳಿಗೆ ಇಳಿದಿದ್ದೀರಿ. ನೀವು ನರೇಂದ್ರ ಮೋದಿಯವರನ್ನು ಓಲ್ಡ್ ಸಿಟಿಗೆ ಕರೆತಂದು ಇಲ್ಲಿ ಪ್ರಚಾರ ಮಾಡಿ ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಅವರ ಸಭೆಯನ್ನು ಇಲ್ಲಿ ಆಯೋಜಿಸಿ ಮತ್ತು ನೀವು ಇಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೀರಿ ಎಂದು ನಾವು ನೋಡುತ್ತೇವೆ" ಎಂದು ಸವಾಲೆಸೆದಿದ್ದಾರೆ.
ಹೈದರಾಬಾದ್ ಹೆಸರನ್ನು ನಾಶಮಾಡಲು ಬಿಜೆಪಿ ಬಯಸಿದೆ ಎಂದು ಅವರು ಆರೋಪಿಸಿರುವ ಅವರು, "ದೆಹಲಿಯಿಂದ ಬರುವ ಪ್ರತಿಯೊಬ್ಬ ರಾಜಕಾರಣಿ ನನ್ನ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಇದು ಪುರಸಭೆಯ ಚುನಾವಣೆಯ ಸಂದರ್ಭ. ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ ಹೊರತಾಗಿ ನನ್ನ ಬಗ್ಗೆ ಮಾತನಾಡುತ್ತಾರೆ. 2019 ಮತ್ತು 2020 ರ ನಡುವೆ ಹೈದರಾಬಾದ್ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒದಗಿಸಿರುವ ನೆರವಿನ ಬಗ್ಗೆ ಪ್ರಶ್ನಿಸಿದರೆ ಅವರ ಬಳಿ ಉತ್ತರವಿಲ್ಲ. ಹೈದರಾಬಾದ್ ಈಗ ಅಭಿವೃದ್ಧಿ ಹೊಂದಿದ ನಗರವಾಗಿದೆ. ಅನೇಕ ಎಂಎನ್ಸಿಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಹೈದರಾಬಾದ್ ಎಂಬ ಹೆಸರನ್ನು ಬದಲಾಯಿಸಲು ಮುಂದಾಗುವ ಮೂಲಕ ಬಿಜೆಪಿ ಹೈದರಾಬಾದ್ನ್ನು ನಾಶ ಮಾಡಲು ಮುಂದಾಗಿದೆ'' ಎಂದು ದೂರಿದರು.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಮೇಲೆ ವಾಕ್ ಪ್ರಹಾರ ನಡೆಸಿರುವ ಓವೈಸಿ, ''ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ಜಾರಿಗೊಳಿಸಲು ಒಪ್ಪಿಕೊಳ್ಳುವ ಮೂಲಕ ದೊಡ್ಡ ತಪ್ಪು ಮಾಡಿದ್ದಾರೆ'' ಎಂದರು.
"ಮುಖ್ಯಮಂತ್ರಿ ಲಾಕ್ಡೌನ್ ಮಾಡಬಾರದಿತ್ತು. ಯಾಕೆಂದರೆ ಕಾನೂನು ಸುವ್ಯವಸ್ಥೆ ರಾಜ್ಯಕ್ಕೆ ಸಂಬಂಧಿಸಿದ್ದು. ನಾನು ಅವರಿಗೆ ಲಾಕ್ಡೌನ್ ಆ ಸಂದರ್ಭದಲ್ಲಿ ಜಾರಿ ಮಾಡಬೇಡಿ ಎಂದು ಹೇಳಿದ್ದೆ. ಲಾಕ್ಡೌನ್ ಅನ್ನು ಯಾವಾಗ ಜಾರಿಗೊಳಿಸಬೇಕು ಎಂದು ನಿರ್ಧರಿಸುವವರು ಮುಖ್ಯಮಂತ್ರಿಗಳು. ಆದರೆ ನಾನು ಅದರ ಬಗ್ಗೆ ಮಾತನಾಡಿದರೆ ಮುಹಮ್ಮದ್ ಅಲಿ ಜಿನ್ನಾ ಎಂದು ಕರೆಯಲ್ಪಡುತ್ತೇನೆ. 70 ವರ್ಷಗಳ ಹಿಂದೆ ಜಿನ್ನಾ ಅವರೊಂದಿಗೆ ನಿಮಗೆ ಏನಾದರೂ ಸಂಬಂಧವಿದೆಯೇ? ಜಿನ್ನಾ ಅನುಯಾಯಿಗಳು ಪಾಕಿಸ್ತಾನಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ನಾವು ಜಿನ್ನಾನ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿ ಭಾರತದಲ್ಲಿ ಉಳಿದಿದ್ದೇವೆ'' ಎಂದು ಹೇಳಿದರು.