ಬೆಂಗಳೂರು, ನ.26(DaijiworldNews/PY): ಇಂದು ದೇಶದಾದ್ಯಂತ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥನಾರಾಯಣ ಸಂವಿಧಾನ ಶಿಲ್ಪಿ ಡಾ.ಬಿ.ಆ.ರ್. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಯಶವಂತಪುರ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಳಿಕ ಮಾತನಾಡಿದ ಅವರು, "ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಇಂದು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ ರಚನೆಯಾಗಿದೆ. ಅವರು ಮಹಾಜ್ಞಾನಿಗಳು. ಈ ಹಿನ್ನೆಲೆ ಅವರನ್ನು ದೇಶ ಇಂದಿಗೂ ಸ್ಮರಿಸುತ್ತದೆ" ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂವಿಧಾನ ದಿನ ಆಚರಣೆ ಹಿನ್ನೆಲೆ ನಾಡಿನ ಜನತೆಗೆ ಟ್ವೀಟ್ ಮೂಲಕ ಶುಭಕೋರಿದ್ದು, "ಪ್ರತಿಯೊಬ್ಬ ಭಾರತೀಯನ ಹಕ್ಕು, ಘನತೆಯನ್ನು ನಮ್ಮ ಸಂವಿಧಾನ ರಕ್ಷಿಸುತ್ತಿದೆ. ನಮ್ಮ ಶ್ರೇಷ್ಠ ಸಂವಿಧಾನದ ಸದಾಶಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾ ಬಿ.ಆರ್.ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಎಲ್ಲ ಮಹನೀಯರಿಗೆ ವಂದಿಸುತ್ತಾ, ಎಲ್ಲರಿಗೂ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು" ಎಂದು ತಿಳಿಸಿದ್ದಾರೆ.