ನವದೆಹಲಿ, ನ. 26 (DaijiworldNews/MB) : ''ವಯಸ್ಕ ಮಹಿಳೆ ತಾನು ಇಷ್ಟಪಟ್ಟವರ ಜತೆ ಬದುಕುವ ಸ್ವಾತಂತ್ಯ್ರ ಹೊಂದಿದ್ದಾಳೆ'' ಎಂದು ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಉತ್ತರ ಪ್ರದೇಶ, ಕರ್ನಾಟಕ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾಗಿದ್ದು ಏತನ್ಮಧ್ಯೆ ದೆಹಲಿ ಹೈಕೋರ್ಟ್ ನೀಡಿರುವ ಈ ತೀರ್ಪು ಈ ನಿಟ್ಟಿನಲ್ಲಿ ಮಹತ್ವ ಪಡೆದಿದೆ.
ಸುಲೇಖಾ ಎಂಬ ಯುವತಿಯು ಬಬ್ಲೂ ಎಂಬ ಯುವಕನನ್ನು ಪ್ರೀತಿಸುತ್ತಿದ್ದು ಆಕೆ ಮನೆ ಬಿಟ್ಟು ಹೋಗಿದ್ದಳು. ಯುವತಿ ಅಪ್ರಾಪ್ತ ವಯಸ್ಕಳು ಅವಳನ್ನು ಅಪಹರಣ ಮಾಡಲಾಗಿದೆ ಎಂದು ಯುವತಿಯ ಕುಟುಂಬಸ್ಥರು ಆರೋಪ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ರಜನೀಶ್ ಭಟ್ನಾಗರ್ ಅವರನ್ನೊಳಗೊಂಡ ಪೀಠವು, ಸುಲೇಖಾ ಜೊತೆ ವಿಡಿಯೋ ಕಾನ್ಫೆರೆನ್ಸ್ ಮುಖೇನ ಮಾತನಾಡಿ ಆಕೆ ಮನೆ ಬಿಟ್ಟು ತೆರಳಿದ ಸಂದರ್ಭ ವಯಸ್ಕಳಾಗಿದ್ದಳು ಎಂದು ಖಚಿತಪಡಿಸಿಕೊಂಡಿದೆ. ಹಾಗೆಯೇ ಬಬ್ಲೂ ಮನೆಗೆ ಸೂಕ್ತ ಭದ್ರತೆ ನೀಡಲು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ಅಲಹಾಬಾದ್ ಹೈಕೋರ್ಟ್ ಈ ಹಿಂದೆ 'ಕೇವಲ ವಿವಾಹಕ್ಕಾಗಿ ಮತಾಂತರ ಒಪ್ಪಲಾಗದು' ಎಂದು ಆದೇಶ ನೀಡಿದ್ದ ಬೆನ್ನಲ್ಲೇ ದೇಶದೆಲ್ಲೆಡೆ ಲವ್ ಜಿಹಾದ್ ಬಗ್ಗೆ ತೀವ್ರ ಚರ್ಚೆಗಳು ನಡೆದಿದೆ. ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಅಸ್ಸಾಂ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾಗಿದೆ. ಏತನ್ಮಧ್ಯೆ ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ರದ್ದುಪಡಿಸಿದೆ. ಹಾಗೆಯೇ ಅಂತರ್ ಧರ್ಮಿಯ ವಿವಾಹದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ''ತನ್ನ ಇಚ್ಛೆಯ ಸಂಗಾತಿಯ ಆಯ್ಕೆ ಹಾಗೂ ಬದುಕುವ ಹಕ್ಕು ವೈಯಕ್ತಿಕ ಸ್ವಾತಂತ್ರದ ಮೂಲವಾಗಿದೆ. ಸಂವಿಧಾನದ 21ನೇ ವಿಧಿಯಡಿ ಇದನ್ನು ಕೊಡಲಾಗಿದೆ'' ಎಂದು ಹೇಳಿದೆ.