ಬೆಂಗಳೂರು, ನ.26(DaijiworldNews/PY): ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಸಿಬಿಐ ತನಿಖಾ ತಂಡ ಹೆಚ್ಚಿನ ವಿಚಾರಣೆ ನಡೆಸಲು ಮೂರು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದೆ.
ರೋಷನ್ ಬೇಗ್ ಅವರನ್ನು ಹೆಚ್ಚಿನ ವಿಚಾರಣೆ ನಡೆಸಲು ತಮ್ಮ ವಶಕ್ಕೆ ನೀಡಿವಂತೆ ಬುಧವಾರ ತನಿಖಾಧಿಕಾರಿ ಸಲ್ಲಿಸಿದ್ದ ಮನವಿಯನ್ನು ಮಾನ್ಯ ಮಾಡಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು, ರೋಷನ್ ಬೇಗ್ ಅವರನ್ನು ಮೂರು ದಿನಗಳ ಕಾಲ ಸಿಬಿಐ ತನಿಖಾ ತಂಡದ ವಶಕ್ಕೆ ನೀಡಿದ್ದು, ನ್ಯಾಯಾಲಯಕ್ಕೆ ನ.28ರ ಬೆಳಿಗ್ಗೆ ಗಂಟೆಗೆ ಹಾಜರು ಪಡಿಸುವಂತೆ ತಿಳಿಸಿದ್ದಾರೆ.
ರೋಷನ್ ಬೇಗ್ ಅವರನ್ನು ಭಾನುವಾರ ಬೆಳಿಗ್ಗೆ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ, ಅದೇ ದಿನ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಇದಾದ ನಂತರ ಬೇಗ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ರೋಷನ್ ಬೇಗ್ ಅವರ ಬಂಧನದ ಬಳಿಕ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹಮ್ಮದ್ ಖಾನ್ ಸೇರಿದಂತೆ ಪಿ.ಡಿ. ಕುಮಾರ್ ಅಲಿಯಾಸ್ ಬಿಡಿಎ ಕುಮಾರ್ ಅವರನ್ನು ಕೂಡಾ ವಿಚಾರಣೆ ನಡೆಸಲಾಗಿದ್ದು, ಅಲ್ಲದೇ, ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ಅವರ ವಿಚಾರಣೆಯನ್ನು ನಡೆಸಲಾಗಿದೆ. ಇವರೆಲ್ಲರ ವಿಚಾರಣೆಯ ಸಂದರ್ಭ ದೊರೆತ ಮಾಹಿತಿಯನ್ನು ಆಧರಿಸಿ ಪುನಃ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಲು ಸಿಬಿಐ ತನಿಖಾ ತಂಡ ತೀರ್ಮಾನ ಕೈಗೊಂಡಿದೆ.