ಬೆಂಗಳೂರು, ನ. 26 (DaijiworldNews/MB) : ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಬಿಐ ಮುಂದೆ ಬುಧವಾರ ಹಾಜರಾಗಿದ್ದು ಅವರನ್ನು ಸಿಬಿಐ ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ಬುಧವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಸಿಬಿಐ ಕಚೇರಿಗೆ ಡಿಕೆ ಶಿವಕುಮಾರ್ ತೆರಳಿ ವಿಚಾರಣೆಗೆ ಹಾಜರಾಗಿದ್ದು ಬಳಿಕ ಬುಧವಾರ ಮುಂಜಾನೆ ಅಗಲಿದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿದ ಹಿನ್ನೆಲೆ ಒಂದು ಗಂಟೆಗಳ ಕಾಲ ಅವರ ವಿಚಾರಣೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಇತ್ತೀಚೆಗೆ ಡಿಕೆಶಿಯವರ ನಿವಾಸ ಸೇರಿದಂತೆ ಹಲವು ಕಡೆ ಸಿಬಿಐ ದಾಳಿ ನಡೆಸಿದಾಗ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದ್ದು, ಇನ್ನೂ ಹೆಚ್ಚು ದಾಖಲೆಗಳನ್ನು ಒದಗಿಸಲು ಡಿಕೆಶಿ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಒಂದು ಗಂಟೆಗಳ ಕಾಲ ಮಾತ್ರ ವಿಚಾರಣೆ ನಡೆಸಲು ಸಾಧ್ಯವಾದ ಹಿನ್ನೆಲೆ ಮತ್ತೊಮ್ಮೆ ಡಿಕೆ ಶಿವಕುಮಾರ್ ಅವರಿಗೆ ಸಿಬಿಐ ನೊಟೀಸ್ ನೀಡುವ ಸಾಧ್ಯತೆಯಿದೆ.