ಬೆಂಗಳೂರು, ನ.25 (DaijiworldNews/PY): "ರಾಜ್ಯದಲ್ಲಿ ನಾನು ಮಾತ್ರ ಆಸ್ತಿ ಸಂಪಾದಿಸುತ್ತಿರುವುದಾ?. ಯಾರ ಮೇಲೆಯೂ ನಡೆಯದ ತನಿಖೆ ನನ್ನ ಮೇಲೆ ಮಾತ್ರ ಏಕೆ ನಡೆಯುತ್ತಿದೆ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಮೇಲೆ ರಾಜಕೀಯ ದ್ವೇಷದಿಂದ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನೇನು ಮಾಡಬಾರದ ಕೆಲಸ ಮಾಡಿಲ್ಲ. ಈ ನಿಟ್ಟಿನಲ್ಲಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ" ಎಂದು ತಿಳಿಸಿದ್ದಾರೆ.
"ಇಲ್ಲಿಯವರೆಗೆ ಯಾರೇ ಮೇಲೆಯೂ ಕೂಡಾ ಈ ರೀತಿಯಾಗಿ ತನಿಖೆಯಾಗಿಲ್ಲ. ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ನನ್ನ ವಿರುದ್ದ ಮಾತ್ರವೇ ತನಿಖೆ ಮಾಡಲಾಗುತ್ತಿದೆ. ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯೇ? ಅಥವಾ ಯಾವುದಾದರೂ ಆರೋ ಸಾಬೀತಾಗಿದೆಯೋ? ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾರೆ. ಈ ಎಲ್ಲಾ ವಿಚಾರದ ಬಗ್ಗೆ ತನಿಖೆ ಮಾಡಿಸಲಿ. ಆದರೆ, ಇದನ್ನು ಬಿಟ್ಟು ತನಿಖೆಯನ್ನು ಸಿಬಿಐಗೆ ನೀಡುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸಿದ್ದಾರೆ.
"ಇದು ತನಿಖೆ ಮಾಡುವ ಪ್ರಕರಣ ಅಲ್ಲ ಎಂದು ಅಡ್ವೋಕೇಟ್ ಜನರಲ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ವಿಚಾರಣೆಯು ಸರ್ಕಾರದ ಒತ್ತಡದಿಂದ ನಡೆಯುತ್ತಿದೆ" ಎಂದಿದ್ದಾರೆ.
"ಸಿಬಿಐ ಅಧಿಕಾರಿಗಳು ನ.23ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, 23ರಂದು ಮಸ್ಕಿಗೆ ಪ್ರವಾಸ ಪೂರ್ವ ನಿಗದಿಯಾಗಿದ್ದ ಕಾರಣ ನ.25ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗುತ್ತಿದ್ದೇನೆ" ಎಂದಿದ್ದಾರೆ.