ಮೈಸೂರು, ನ. 25 (DaijiworldNews/MB) : ಮೈಸೂರು ಕಮಿಷನರ್ ಕಚೇರಿ ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹರವರು ಹೇಳಿದ್ದಾರೆ.
ಮೈಸೂರಿನ ಹೊಸ ಕಮಿಷನರ್ ಕಚೇರಿಯನ್ನು ಮಂಗಳವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಉದ್ಘಾಟನೆ ಮಾಡಿದ್ದಾರೆ. 2013ರ ಡಿಸೆಂಬರ್ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೈಸೂರು ಕಮಿಷನರ್ ಕಚೇರಿ ನಿರ್ಮಾಣಕ್ಕೆ 16.76 ಕೋಟಿ ರೂ. ಮಂಜೂರು ಮಾಡಿದ್ದರು. ಬಳಿಕ 2018ರ ಜನವರಿಯಲ್ಲಿ ಹೆಚ್ಚುವರಿಯಾಗಿ 2.60 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಕಚೇರಿ ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯನವರು ಎಂದು ಪೋಸ್ಟ್ ಮಾಡಲು ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ''ಅಧಿಕಾರದ ಸ್ಥಾನದಲ್ಲಿ ಪಲ್ಲಟ ಸಹಜ, ಆದರೆ ಆಡಳಿತ ನಿರಂತರ. ಹೌದು ನಿನ್ನೆ ಮೈಸೂರಿನಲ್ಲಿ ಉದ್ಘಾಟನೆ ಮಾಡಿದ ಕಮಿಷನರ್ ಕಚೇರಿಯನ್ನು ಮಂಜೂರು ಮಾಡಿ, ಶಂಕು ಸ್ಥಾಪನೆ ಮಾಡಿದ್ದು ಸಿದ್ದರಾಮಯ್ಯ ಸಾಹೇಬರು. ಸಂಸದನಾಗಿ ನಾನು ಪಾಲ್ಗೊಂಡ ಮೊದಲ ಸರ್ಕಾರಿ ಕಾರ್ಯಕ್ರಮವೂ ಅದಾಗಿತ್ತು. ಖಂಡಿತ ನೆನಪು ಮಾಡಿಕೊಳ್ಳುತ್ತಿದ್ದೆ, ಭಾಷಣ ಮಾಡುವ ಅವಕಾಶ ನನಗೆ ಸಿಗಲಿಲ್ಲ. ಉಸ್ತುವಾರಿ ಸಚಿವರಿಗೆ ಸಿದ್ದರಾಮಯ್ಯ ಸಾಹೇಬರ ಹೆಸರು ಹೇಳಿ ಅಂದಿದ್ದೆ, ವಿಳಂಬದಿಂದಾಗಿ ಅವರೂ ಭಾಷಣ ಮಾಡಲಿಲ್ಲ. ಅನ್ಯಥಾ ಭಾವಿಸಬೇಡಿ'' ಎಂದು ಹೇಳಿದ್ದಾರೆ.