ಬೆಂಗಳೂರು, ನ.25 (DaijiworldNews/PY): "ಹದಿನೇಳು ಮಂದಿಯಿಂದ ಬಿಜೆಪಿ ಸರ್ಕಾರ ಬಂದಿಲ್ಲ. ಬದಲಾಗಿ ಕಾರ್ಯಕರ್ತರ ಶ್ರಮದ ಫಲವಾಗಿ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ 105 ಶಾಸಕರು ಗೆದ್ದಿದ್ದರು. ಯಾರೋ ಒಬ್ಬರಿಂದಾಗಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಪಕ್ಷವು ಲಕ್ಷಾಂತರ ಕಾರ್ಯಕರ್ತರದ ಪರಿಶ್ರಮದಿಂದಾಗಿ ಅಧಿಕಾರಕ್ಕೆ ಬಂದಿದೆ" ಎಂದಿದ್ದಾರೆ.
"ಮೊದಲು 105 ಶಾಸಕರು ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ 17 ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸರ್ಕಾರವು ನನ್ನಿಂದಲೇ ಅಧಿಕಾರಕ್ಕೆ ಬಂದಿದೆ ಎಂದು ಯಾರು ಹೇಳಿಕೊಳ್ಳುತ್ತಾರೋ ಅವರು ಈ ವಿಚಾರವನ್ನು ತಿಳಿದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸಿಎಂ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದರೆ ಏನು ತಪ್ಪು ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಇದು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ. ಎಲ್ಲದಕ್ಕೂ ಪಕ್ಷದ ತೀರ್ಮಾನ ಅಂತಿಮ" ಎಂದಿದ್ದಾರೆ.
"ಇಂದು ನಮ್ಮ ನಿವಾಸದಲ್ಲಿ ಹತ್ತು ಮಂದಿ ಶಾಸಕರು ಒಟ್ಟಿಗೆ ಸೇರಿದ್ದೆವು ನಾವು ಹೋಟೆಲ್, ರೆಸಾರ್ಟ್ನಲ್ಲಿ ಸಭೆ ಮಾಡುವುದಿಲ್ಲ. ನಮ್ಮ ನಿವಾಸದಲ್ಲಿ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ ವರಿಷ್ಟರಿಗೆ ಕೂಡಲೇ ತಿಳಿಸುತ್ತೇವೆ" ಎಂದು ಹೇಳಿದ್ದಾರೆ.