ಹೈದರಾಬಾದ್, ನ. 25 (DaijiworldNews/MB) : ''ನಗರದ ಓಲ್ಡ್ ಸಿಟಿಯಲ್ಲಿ ನೆಲೆಸಿರುವ ಬಾಂಗ್ಲಾದೇಶ, ರೋಹಿಂಗ್ಯಾ ಹಾಗೂ ಪಾಕಿಸ್ತಾನದ ವಲಸಿಗರ ವಿರುದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು. ಈ ಮೂಲಕ ಅವರನ್ನು ಹೊರ ಹಾಕಲಾಗುವುದು'' ಎಂದು ಸಂಸದ ಹಾಗೂ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ ಅವರು, ''ಬಿಜೆಪಿಯವರು ಹೈದಾರಾಬಾದ್ನಲ್ಲಿ ಮೇಯರ್ ಆದರೆ ಅಕ್ರಮ ವಲಸಿಗರನ್ನು ಹೊರ ಹಾಕಲಾಗುತ್ತದೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ಕೊನೆಗಾಣಿಸಲಾಗುವುದು'' ಎಂದು ಹೇಳಿದ್ದಾರೆ.
ಬಂಡಿ ಸಂಜಯ್ ಈ ಹೇಳಿಕೆ ನೀಡಿದ್ದು ಈಗ ಇದು ವಿವಾದ ಸೃಷ್ಟಿಸಿದ್ದು, ಟಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ಬಂಡಿ ಸಂಜಯ್ ಅವರ ಹೇಳಿಕೆ ಖಂಡಿಸಿ ಅವರ ವಿರುದ್ದ ವಾಗ್ದಾಳಿ ನಡೆಸಿದೆ. ''ಮತ ಪಡೆಯಲೆಂದು ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ಪದ ಬಳಸಬಾರದು. ನೀವು ಬೇಕಾದರೆ ಬಡತನ, ಭ್ರಷ್ಟಾಚಾರ, ಸಮಾಜಘಾತುಕ ಶಕ್ತಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿ'' ಎಂದು ಟಿಆರ್ಎಸ್ ಪಕ್ಷದ ಮುಖಂಡ ಹಾಗೂ ಸಚಿವ ಕೆ.ಟಿ ರಾಮರಾವ್ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ, ''ಲಡಾಖ್ನಲ್ಲಿ ಚೀನಿಯರ ವಿರುದ್ಧ ಯಾಕೆ ಸರ್ಜಿಕಲ್ ಸ್ಟ್ರೈಕ್ ಮಾಡಲಿಲ್ಲ'' ಎಂದು ಪ್ರಶ್ನಿಸಿದ್ದಾರೆ.