ಬೆಂಗಳೂರು, ನ. 25 (DaijiworldNews/MB) : ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ತಮಿಳುನಾಡಿನ ಕರಾವಳಿ ಮೇಲೆ ನಿವಾರ್ ಚಂಡಮಾರುತ ಅಪ್ಪಳಿಸಲಿದೆ. ಪ್ರತಿ ಗಂಟೆಗೆ 100 ರಿಂದ 110 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ದಕ್ಷಿಣ ರಾಜ್ಯಗಳ ಮೇಲೆ ಈ ಚಂಡ ಮಾರುತದ ಪರಿಣಾಮ ಉಂಟಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ''ರಾಜ್ಯ ಸರ್ಕಾರ ಏನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ'' ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ''ದಕ್ಷಿಣ ರಾಜ್ಯಗಳ ಮೇಲೆ ತೀವ್ರ ಸ್ವರೂಪದ ನಿವಾರ್ ಚಂಡಮಾರುತ ಅಪ್ಪಳಿಸಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಬಿ ಎಸ್ ಯಡಿಯೂರಪ್ಪನವರೇ, ಹಿಂದಿನ ಹಲವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತಮ್ಮ ಸರ್ಕಾರ ಬೇಜಾವಾಬ್ದಾರಿಯಿಂದ ವರ್ತಿಸಿದೆ, ಈಗ ನಿಮ್ಮ ಸರ್ಕಾರ ಏನು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ? ಯಾವ ರಕ್ಷಣಾ ಕ್ರಮಗಳಿಗೆ ಸನ್ನದ್ಧವಾಗಿದೆ?'' ಎಂದು ಕೇಳಿದೆ.
ನಿವಾರ್ ಚಂಡಮಾರುತ ಮಂಗಳವಾರ ರಾತ್ರಿಯೇ ತೀವ್ರ ಸ್ವರೂಪ ತಳೆದಿದ್ದು ಬುಧವಾರ ರಾತ್ರಿ ವೇಳೆ ತಮಿಳುನಾಡು ಮತ್ತು ಪುದುಚೇರಿಯನ್ನು ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಬುಧವಾರ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಅಲ್ಲದೆ ತಮಿಳುನಾಡಿನ 7 ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.