ಬೆಂಗಳೂರು, ನ.25 (DaijiworldNews/PY): "ಡಿ.5ರಂದು ಕರ್ನಾಟಕ ಬಂದ್ ಶತಃಸಿದ್ಧ" ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಮಾಡಲು ಮುಂದಾಗಿದ್ದು, ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ತಕ್ಷಣವೇ ಸರ್ಕಾರ ಈ ನಿರ್ಧಾರವನ್ನು ಬದಲಾಯಿಸಬೇಕು. ಇಲ್ಲವಾದಲ್ಲಿ ಬಂದ್ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ಡಿ.5ರಂದು ನಡೆಯಲಿರುವ ಬಂದ್ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಬಂದ್ ಮಾಡಿಯೇ ತೀರುತ್ತೇವೆ. ಸಾಧ್ಯವಾದಲ್ಲಿ ಸರ್ಕಾರವೇ ಬಂದ್ ತಡೆಯಲಿ" ಎಂದಿದ್ದಾರೆ.
"ಡಿ.5ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸಲಿದ್ದೇವೆ. ಮರಾಠ ಅಭಿವೃದ್ಧಿ ನಿಗಮ ರಚನೆಯ ತೀರ್ಮಾನವನ್ನು ಹಿಂಪಡೆದುಕೊಳ್ಳಲು ನ.30ರವರೆಗೆ ಕಾಲಾವಕಾಶವಿದೆ. ಈ ಬಗ್ಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಬಂದ್ ಶತಃಸಿದ್ಧ" ಎಂದು ಹೇಳಿದ್ದಾರೆ.