ಹೈದರಾಬಾದ್, ನ. 25 (DaijiworldNews/MB) : ''ಬಿಜೆಪಿ ಮಸೀದಿಗಳನ್ನು ನಾಶಪಡಿಸುತ್ತದೆ, ಆದರೆ ನಾವು ಮಂದಿರಕ್ಕಾಗಿ 10 ಕೋಟಿ ಸಂಗ್ರಹಿಸುತ್ತಿದ್ದೇವೆ'' ಎಂದು ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮುಂಬರುವ ಜಿಎಚ್ಎಂಸಿ ಚುನಾವಣೆಗೆ ಎಐಐಐಎಂ ಪರ ಪ್ರಚಾರ ನಡೆಸಿ ಅಜಂಪುರಾದ ಫರ್ಹತ್ ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದು ''ಬಿಜೆಪಿ ಪಕ್ಷವು ದೇಶದಲ್ಲಿ ದ್ವೇಷವನ್ನು ಉತ್ತೇಜಿಸುತ್ತದೆ. ಆದರೆ ನಾವು ಎಲ್ಲರನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ'' ಎಂದರು.
"ಇದು ನಿಮ್ಮ ಮತ್ತು ನಮ್ಮ ನಡುವಿನ ವ್ಯತ್ಯಾಸ. ನೀವು ಧ್ವಂಸ ಮಾಡುವ ಬಗ್ಗೆ ಮಾತನಾಡುತ್ತೀರಿ ಮತ್ತು ನಾವು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತೇವೆ" ಎಂದು ಬಿಜೆಪಿಯನ್ನು ಟೀಕಿಸಿದರು.
ರಾಮ ಜನ್ಮಭೂಮಿ ಚಳುವಳಿ ಹಾಗೂ ಬಾಬ್ರಿ ಮಸೀದಿ ಧ್ವಂಸದ ವಿಚಾರವಾಗಿ ಸೂಕ್ಷ್ಮ ಉಲ್ಲೇಖ ಮಾಡಿದ ಅವರು, ''ತೆಲಂಗಾಣ ವಿಧಾನಸಭೆಯಲ್ಲಿ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ದೇವಸ್ಥಾನವೊಂದಕ್ಕೆ 10 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದಾರೆ. ಆ ಸಂದರ್ಭ ಮುಖ್ಯಮಂತ್ರಿ ಆಘಾತಕ್ಕೊಳಗಾಗಿದ್ದಾರೆ. ಎಲ್ಲಾ ಧರ್ಮದ ಜನರು ಇಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ತಮ್ಮ ಧರ್ಮವನ್ನು ಅನುಸರಿಸಬೇಕೆಂದು ನಾವು ಬಯಸುತ್ತೇವೆ. 1980 ಮತ್ತು 1990 ರ ಪರಿಸ್ಥಿತಿಯನ್ನು ಇಲ್ಲಿ ಪುನರಾವರ್ತಿಸಲು ನಾನು ಆಸ್ಪದ ನೀಡಲಾರೆವು" ಎಂದು ಹೇಳಿದರು.
"ನಾನು ಮಕ್ಕಳ ಮನಸ್ಸನ್ನು ಹಾಳುಮಾಡಲು ಬಯಸುವುದಿಲ್ಲ ಆದರೆ ಬಿಜೆಪಿ ದ್ವೇಷವನ್ನು ಉತ್ತೇಜಿಸಲು ಬಯಸಿದೆ" ಎಂದು ಓವೈಸಿ ಬಿಜೆಪಿಯನ್ನು ದೂರಿದರು.
ಜಿಎಚ್ಎಂಸಿ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.